ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ತಿಂಗಳ ಹಿಂದಿನ ಕೋಮು ಸೂಕ್ಷ್ಮ ಘಟನೆಗಳೇ ಇಂದಿನ ಕಾನೂನು ಬಿಗಿತಕ್ಕೆ ಕಾರಣವಾಗಿದ್ದು ಕಠಿಣ ಕ್ರಮಗಳಿಂದ ಜಿಲ್ಲೆಯಲ್ಲಿ ಶಾಂತಿ ಮರುಕಳಿಸಿದೆ ಎಂದು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೇ ತಿಂಗಳಲ್ಲಿ ನಡೆದ ಕೊಲೆ, ಚೂರಿ, ಇರಿತ ಪ್ರಕರಣಗಳಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಕಪ್ಪು ಚುಕ್ಕೆಯಾದರೂ, ರಾಜ್ಯ ಸರ್ಕಾರ ತಕ್ಷಣವೇ ಹೊಸ ಅಧಿಕಾರಿಗಳನ್ನು ನಿಯೋಜಿಸಿ ಕಾನೂನು ಸುವ್ಯವಸ್ಥೆ ಸುಧಾರಿಸಲು ಮುಕ್ತ ಅವಕಾಶ ನೀಡಿತು.
ಹೊಸ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡ ನಂತರ, ಡ್ರಗ್ಸ್, ಸ್ಕಿಲ್‌ಗೇಮ್, ಮಟ್ಕಾ, ಜೂಜು ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣ ಮಟ್ಟಹಾಕಿದರು. ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ಶಾಂತಿ ಮರುಕಳಿಸಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕುತ್ತಿದ್ದಾರೆ.
ಮುಂದಿನ ಹಂತವಾಗಿ ತಡರಾತ್ರಿ ನಡೆಯುವ ಪಾರ್ಟಿ, ಡಿಜೆ, ಧ್ವನಿವರ್ಧಕ ಬಳಕೆಗೆ ನಿಯಮ ಹೇರಲಾಗಿದೆ. ಅನುಮತಿ ಇಲ್ಲದೆ ನಡೆದ ಕೆಲ ಕಾರ್ಯಕ್ರಮಗಳನ್ನು ಮಾತ್ರ ನಿಲ್ಲಿಸಲಾಗಿದೆ. ಆದರೆ, ಹಬ್ಬ-ಹರಿದಿನಗಳು, ಧಾರ್ಮಿಕ ಆಚರಣೆಗಳು ಹಾಗೂ ಮೆರವಣಿಗೆಗಳು ಎಂದಿನಂತೆ ಅದ್ದೂರಿಯಾಗಿ ನಡೆದಿವೆ. ಮುಂದಿನ ನವರಾತ್ರಿ ಹಾಗೂ ದಸರಾ ಹಬ್ಬಗಳೂ ಅದೇ ರೀತಿ ನಡೆಯಲಿವೆ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ.
ವಾಸ್ತವವನ್ನು ಮರೆಯಬೇಡಿ!
ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಮೇ ತಿಂಗಳ ಅಶಾಂತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ ಅಶಾಂತಿಗೆ ಕಾರಣರಾದವರು ಯಾರು, ನೆಮ್ಮದಿಯನ್ನು ಕೆಡಿಸಲು ಯತ್ನಿಸಿದವರು ಯಾರು ಎಂಬುದು ಜನತೆಗೆ ತಿಳಿದಿರುವ ಸಂಗತಿ. ಅಧಿಕಾರಿಗಳು ಮಾರ್ಗಸೂಚಿ ಬಿಡುಗಡೆ ಮಾಡಿರುವುದು ರಾಜಕೀಯ ಕಾರಣಕ್ಕಾಗಿ ಅಲ್ಲ, ಕಾನೂನು ಸುವ್ಯವಸ್ಥೆ ಕಾಪಾಡಲು ಮಾತ್ರ ಎಂದವರು ಹೇಳಿದ್ದಾರೆ.