ಬಾಗಲಕೋಟೆ: ಪೆನ್ ವಿಚಾರಕ್ಕೆ ನಡೆದ ಜಗಳದಲ್ಲಿ ಐದನೇ ತರಗತಿಯ ವಿದ್ಯಾರ್ಥಿಯ ಕಣ್ಣು ಗುಡ್ಡೆಯನ್ನ ಒಂದನೇ ತರಗತಿ ವಿದ್ಯಾರ್ಥಿ ಕಿತ್ತಿರುವಂತಹ ಘಟನೆ ಬಾಗಲಕೋಟೆ ಜಿಲ್ಲೆಯ ಢವಳೇಶ್ವರ ಗ್ರಾಮದಲ್ಲಿರುವ ಮೊರಬದ ವಸತಿ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.3 ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಶಿಕ್ಷಕರ ಬೇಜವಾಬ್ದಾರಿತನ ಕಂಡು ಬಂದ ಹಿನ್ನೆಲೆಯಲ್ಲಿ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಶಿಕ್ಷಕರ ಮೇಲೆ FIR ಆಗಿದೆ.
ಒಂದನೇ ತರಗತಿ ವಿದ್ಯಾರ್ಥಿ ಭಿಮಪ್ಪ ಲೋಕುರೆಗೆ ಐದನೇ ತರಗತಿ ವಿದ್ಯಾರ್ಥಿ ಸಮರ್ಥ್ ಪೆನ್ ನೀಡಿದ್ದ. ಅದನ್ನು ವಾಪ್ ಕೇಳಿದ್ದಕ್ಕೆ ವಿದ್ಯಾರ್ಥಿ ಭಿಮಪ್ಪ ಅಟ್ಯಾಕ್ ಮಾಡಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಬಾಲಕನನ್ನ ಬೆಳಗಾವಿ ಜಿಲ್ಲೆ ಅಥಣಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಾಲಕನ ಬಲಗಣ್ಣಿಗೆ ಗಂಭೀರ ಗಾಯವಾಗಿದೆ.
ಘಟನೆ ಬಗ್ಗೆ ಮುಖ್ಯ ಶಿಕ್ಷಕಿ ಜಯಶ್ರೀ ನಡುವಿನಕೇರಿ, ಅತಿಥಿ ಶಿಕ್ಷಕಿ ಶಿಲ್ಪಾ ಅಂಬಿಗೆ ಗಮನಕ್ಕೆ ತಂದಿದ್ದಾರೆ. ಘಟನೆಯನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಶಿಕ್ಷರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರಗೆ ಮನವಿ ಮಾಡಲಾಗಿದೆ. ಕಣ್ಣು ಕಳೆದುಕೊಂಡ ವಿದ್ಯಾರ್ಥಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಮನವಿ ಮಾಡಲಾಗಿದೆ.