ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಯಾವ ಆಧಾರದ ಮೇಲೆ ನನ್ನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಜನಾರ್ದನ ರೆಡ್ಡಿಯವರು ನ್ಯಾಯಾಲಯದಲ್ಲಿ ಉತ್ತರಿಸಲಿ ಎಂದು ತಮಿಳುನಾಡಿನ ಸಂಸದ ಹಾಗೂ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ದೂರು ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ”ಯಾವುದೋ ವಾಟ್ಸ್ಆ್ಯಪ್ ಫಾರ್ವರ್ಡ್ ಮೆಸೇಜ್ ನೋಡಿಕೊಂಡು ಬಂದು ಧರ್ಮಸ್ಥಳದ ವಿರುದ್ಧದ ಆರೋಪಗಳ ಹಿಂದಿನ ಮಾಸ್ಟರ್ ಮೈಂಡ್, ಸ್ಕ್ರಿಪ್ಟ್ ರೈಟರ್ ನಾನು ಎಂದು ಜನಾರ್ದನ ರೆಡ್ಡಿಯವರು ಆರೋಪಿಸಿದ್ದಾರೆ. ಓರ್ವ ಸಂಸದನಾಗಿ ನಾನು ಇಂತಹ ಬಾಲಿಶವಾದ ಆರೋಪಗಳಿಗೆ ಉತ್ತರಿಸಬೇಕೇ ಎಂದು ಸುಮ್ಮನಾಗಿದ್ದೆ. ಆದರೆ, ಇದು ದಿನಕ್ಕೊಂದು ಸ್ಟೋರಿ ಕ್ರಿಯೇಟ್ ಆಗುತ್ತಿರುವುದರಿಂದ ನಾನು ಪ್ರತಿಕ್ರಿಯಿಸಲೇಬೇಕಿದೆ. ಸಂಸದನಾಗಿ ನಾನು ಸಾರ್ವಜನಿಕವಾಗಿ ಮತ್ತು ಕಾನೂನಾತ್ಮಕ ಉತ್ತರ ನೀಡಬೇಕಿರುವುದರಿಂದ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದೇನೆ” ಎಂದು ತಿಳಿಸಿದರು.
“10 ವರ್ಷ ಕರ್ನಾಟಕದಲ್ಲಿ ಕೆಲಸ ಮಾಡಿರುವ ನಾನು ಇಲ್ಲಿ ಅಪರಿಚಿತನಲ್ಲ. ನನ್ನ ವಿರುದ್ಧ ಆರೋಪಿಸಿರುವ ವ್ಯಕ್ತಿಯೂ ಯಾರು ಎನ್ನುವುದು ಎಲ್ಲರಿಗೂ ತಿಳಿದಿದೆ. ಕರ್ನಾಟಕದ ಸಂಪತ್ತನ್ನ ಲೂಟಿ ಮಾಡಿ 7 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಇಂತಹ ವ್ಯಕ್ತಿಯ ಸುಳ್ಳು ಮಾತನ್ನ ಹರಡಲು ಬಿಟ್ಟರೆ ಅದು ನನ್ನ ತಪ್ಪಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಅವರ ವಿರುದ್ಧ ಖಾಸಗಿ ದೂರು ಸಲ್ಲಿಸುತ್ತಿದ್ದೇನೆ. ಅವರು ನ್ಯಾಯಾಲಯದಲ್ಲಿ ಬಂದು ಉತ್ತರಿಸಲಿ” ಎಂದರು.
“ಇಡೀ ದೇಶದಲ್ಲಿ ನಾನು ಬಲಪಂಥದ ರಾಜಕಾರಣ ಎದುರಿಸಿಕೊಂಡೇ ಬರುತ್ತಿದ್ದೇನೆ. ಅದೇ ಕಾರಣದಿಂದ ನಾನು ರಾಜೀನಾಮೆ ನೀಡಿದ್ದೆ ಮತ್ತು ಅದನ್ನ ರಾಜೀನಾಮೆ ಪತ್ರದಲ್ಲೂ ಉಲ್ಲೇಖಿಸಿದ್ದೆ. ಅದನ್ನ ಮನಸ್ಸಿನಲ್ಲಿಟ್ಟುಕೊಂಡೇ ಈ ರೀತಿ ರಾಜಕೀಯ ಆರೋಪಗಳನ್ನ ಮಾಡುತ್ತಿರುವುದು ನನಗೆ ಕಂಡು ಬಂದಿದೆ. ಈ ರೀತಿ ಆರೋಪಿಸುತ್ತಿರುವುದು ಬಲಪಂಥೀಯ ವ್ಯವಸ್ಥಿತ ಯತ್ನದ ಭಾಗವಾಗಿವೆ. ದೆಹಲಿಯಲ್ಲಿ ಭೇಟಿಯಾಗಿ ತಲೆ ಬುರುಡೆಯನ್ನ ನಾನೇ ಕೊಟ್ಟಿದ್ದೇನೆ ಎಂದಿದ್ದಾರೆ. ಸಂಸದನಾಗಿ 1 ವರ್ಷವಾದರೂ ಈ ಸರ್ಕಾರ ನನಗೆ ದೆಹಲಿಯಲ್ಲಿ ಇನ್ನೂ ಮನೆಯನ್ನೇ ನೀಡಿಲ್ಲ, ನಾನಿನ್ನೂ ತಮಿಳುನಾಡಿನ ನಿವಾಸದಲ್ಲೇ ಇದ್ದೇನೆ. ತಲೆಬುರುಡೆ ಎಲ್ಲಿ ಸಿಗುತ್ತದೆ ಎಂದೂ ನನಗೆ ಗೊತ್ತಿಲ್ಲ. ಬಹುಶಃ ಜನಾರ್ದನ ರೆಡ್ಡಿಯವರಿಗೆ ಚೆನ್ನಾಗಿ ಗೊತ್ತಿರಬಹುದು” ಎಂದು ತಿರುಗೇಟು ನೀಡಿದರು.
ವಕೀಲ ಸೂರ್ಯ ಮುಕುಂದರಾಜ್ ಅವರೊಂದಿಗೆ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ ಸಸಿಕಾಂತ್ ಸೆಂಥಿಲ್ ಅವರು ಖಾಸಗಿ ದೂರು ಸಲ್ಲಿಕೆ ಮಾಡಿದ್ದು, ಸೆಪ್ಟೆಂಬರ್ 11ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.