ಬೆಂಗಳೂರು: ಮೈಸೂರು ದಸರಾ ಉದ್ಘಾಟನೆ ಕುರಿತ ವಿವಾದ ಹೊಸ ತಿರುವು ಪಡೆದಿದೆ. ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವ ನಿರ್ಧಾರವನ್ನು ಪ್ರಶ್ನಿಸಿ, ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹಾಸನದ ಅಮೀರ್ ಮೊಹಲ್ಲಾದಲ್ಲಿನ ಬಾನು ಮುಷ್ತಾಕ್ ಅವರ ನಿವಾಸಕ್ಕೆ ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಿದ ಬಳಿಕ ಈ ವಿವಾದ ಮತ್ತಷ್ಟು ಗರಿಗೆದರಿದೆ. ಸರ್ಕಾರದ ಕ್ರಮವನ್ನು ತಡೆಗಟ್ಟುವಂತೆ ಕೋರಿ ಪ್ರತಾಪ್ ಸಿಂಹ ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
“ದಸರಾ ಉದ್ಘಾಟನೆಯು ಧಾರ್ಮಿಕ ಆಚರಣೆಗಳೊಂದಿಗೆ, ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಸಂಪ್ರದಾಯವನ್ನು ಹೊಂದಿದೆ. ಬಾನು ಮುಷ್ತಾಕ್ ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಭಾವನೆಗಳನ್ನು ಹೊಂದಿದ್ದಾರೆ. ಹೀಗಾಗಿ ಅವರ ನೇಮಕ ಹಿಂದೂ ಸಮುದಾಯದ ಭಾವನೆಗೆ ಧಕ್ಕೆ ತರುತ್ತದೆ” ಎಂದು ಪ್ರತಾಪ್ ಸಿಂಹ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಮೊದಲು, ಮೈಸೂರಿನ ರಾಜಮನೆತನದವರು ಕೂಡ ಬಾನು ಮುಷ್ತಾಕ್ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರವನ್ನು ನಿರ್ಧಾರ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದವು.
ಇತ್ತೀಚೆಗೆ ರಾಷ್ಟ್ರ ರಕ್ಷಣಾ ಸೇನೆ ಕಾರ್ಯಕರ್ತರು ಬಾನು ಮುಷ್ತಾಕ್ ಅವರನ್ನು ಭೇಟಿ ಮಾಡಿ, “ದಸರಾ ಉದ್ಘಾಟನೆ ಮಾಡಬೇಡಿ, ಆಹ್ವಾನ ತಿರಸ್ಕರಿಸಿ” ಎಂದು ಮನವಿ ಮಾಡಿದ್ದರು.
ಅಧಿಕೃತ ಆಹ್ವಾನ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಬಾನು ಮುಷ್ತಾಕ್, “ಜಿಲ್ಲಾಡಳಿತದ ಧನ್ಯವಾದಕ್ಕೆ ಪಾತ್ರರಾಗಿದ್ದೇನೆ. ದಸರಾ ನಮ್ಮೆಲ್ಲರ ಮನೆಯ ಹಬ್ಬ” ಎಂದು ಕೊಂಡಾಡಿದ್ದರು.