ಮಂಗಳೂರು: ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಪೆರ್ನೆಯಲ್ಲಿ ಹಟ್ಟಿಯಿಂದ ಹಸುವನ್ನು ಕದ್ದು, ಮಾಲಕ ತೋಟದಲ್ಲೇ ಹತ್ಯೆ ಮಾಡಿ ಮಾಂಸ ಮಾಡಿ, ಅದರ ತ್ಯಾಜ್ಯವನ್ನು ಎಸೆದು ಹೋದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕಳೆದ ಆ.14ರಂದು ಬಂಟ್ವಾಳ ತುಂಬೆ ಬಳಿಯೂ ಜಾನುವಾರು ಕದ್ದು, ಮಾಂಸ ಮಾಡಿ ಅದರ ಅಂಗಾಗಗಳನ್ನು ಸ್ಥಳದಲ್ಲಿಯೇ ಎಸೆದು ಹೋಗಿದ್ದ ಪ್ರಕರಣದಲ್ಲೂ ಶಾಮೀಲಾಗಿದ್ದಾರೆ.
ಬಂಧಿತರನ್ನು ಮಂಗಳೂರು ಕುದ್ರೋಳಿ ನಿವಾಸಿ, ಬೀಫ್ ಸ್ಟಾಲ್ ಮಾಲಕ ಮಹಮ್ಮದ್ ಮನ್ಸೂರ್ (48), ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34) ಹಾಗೂ ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಎಂದು ಗುರುತಿಸಲಾಗಿದೆ.
ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ಗುರುವಾರ ನಸುಕಿನಲ್ಲಿ ದೇಜಪ್ಪ ಮೂಲ್ಯ ಅವರ ಮನೆ ಹಟ್ಟಿಯಲ್ಲಿದ್ದ ಗಬ್ಬದ ಹಸುವನ್ನು ಕದ್ದೊಯ್ದು, ತೋಟದಲ್ಲೇ ಹತ್ಯೆ ಮಾಡಿ ಮಾಂಸ ಮಾಡಿಕೊಂಡು, ಅದರ ರ್ಯಾಜ್ಯವನ್ನು ಸ್ಥಳದಲ್ಲಿಯೇ ಬಿಟ್ಟು ಹೋದ ಘಟನೆ ಆಕ್ರೋಶ ಹುಟ್ಟಿಸಿತ್ತು. ಬಿಜೆಪಿ ಮುಖಂಡರು ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದರು. ಪುತ್ತೂರು ಶಾಸಕ ಅಶೋಕ್ ರೈ ಅವರು ಸಂತ್ರಸ್ತರ ಮನೆಗೆ ಭೇಟಿ ನೀಡಿ ʻಗೋಹಂತಕರ ಕೈ ಕಡಿಯಬೇಕುʼ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಸ್ತುತ ಆರೋಪಿಗಳ ವಿರುದ್ಧ ಅಕ್ರ:76/2025, ಬಿಎನ್‌ಎಸ್ 2023 (U/s-331(4),305); ಕರ್ನಾಟಕ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020 (U/s-4,5)ರಂತೆ ಪ್ರಕರಣ ದಾಖಲಾಗಿದೆ.
ತುಂಬೆಯಲ್ಲೂ ಕೃತ್ಯ ಎಸಗಿದ್ದರು…!
ಇದೇ ತಂಡ ಆಗಸ್ಟ್ 14ರಂದು ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ತುಂಬೆ ಪ್ರದೇಶದಲ್ಲಿ ಸಹ ಜಾನುವಾರು ಕಳವು ಹಾಗೂ ಹತ್ಯೆ ನಡೆಸಿದ್ದು, ಮರುದಿನ ಇದರ ಅವಶೇಷಗಳು ಸಹ ಸ್ಥಳದಲ್ಲೇ ಪತ್ತೆಯಾಗಿತ್ತು. ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ:125/2025, ಕಲಂ: 303(2), BNS, ಕಲಂ: 4,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.