ಬಂಟ್ವಾಳ: ಬ್ರಹ್ಮರಕೋಟ್ಲು ಟೋಲ್ ಪ್ಲಾಜಾದ ಬಳಿಯ ಸರ್ವೀಸ್ ರಸ್ತೆಯು ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ತುಂಬಿದ್ದು, ರಸ್ತೆಯ ಸಮಸ್ಯೆ ಬಗ್ಗೆ ಸಾರ್ವಜನಿಕರಿಂಸದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ರಾ.ಹೆ.75 ರ ಬಿ.ಸಿ.ರೋಡು ಸಮೀಪದ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಬಳಿಯ ಸರ್ವೀಸ್ ರಸ್ತೆಯು ಅಸ್ತವ್ಯಸ್ತಗೊಂಡಿದ್ದು, ರಸ್ತೆ ಸರಿಪಡಿಸಿಕೊಡುವಂತೆ ಜನರಿಂದ ಒತ್ತಾಯಗಳು ಕೇಳಿ ಬರುತ್ತಿದೆ. ಬಿ.ಸಿ.ರೋಡಿನಿಂದ ಸರ್ವೀಸ್ ರಸ್ತೆಯಲ್ಲಿ ಸಾಗಿದ ವಾಹನಗಳು ಬ್ರಹ್ಮರಕೋಟ್ಲು ಎಂಬಲ್ಲಿ ಹೆದ್ದಾರಿ ಸೇರುವ ಭಾಗದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಲಘು ವಾಹನಗಳು ಜಖಂಗೊಳ್ಳುವ ಸ್ಥಿತಿ ಎದುರಾಗಿದೆ.
ಹೆದ್ದಾರಿಗೆ ಸಂಪರ್ಕಿಸುವ ಏರು ರಸ್ತೆಯಲ್ಲಿ ಒಂದು ಅಡಿಗೂ ಆಳದ ಬೃಹತ್ ಹೊಂಡ ಗುಂಡಿಗಳಿದ್ದು, ಸಣ್ಣ ಕಾರುಗಳ ತಳ ಭಾಗಕ್ಕೆ ತಾಗಿ ವಾಹನಗಳಿಗೆ ಹಾನಿಯಾಗುತ್ತಿದೆ. ಇದರಿಂದ ವಾಹನಗಳು ಜಖಂಗೊಂಡ ಉದಾಹರಣೆಗಳು ಕೂಡ ಸಾಕಷ್ಟಿದೆ.
ಸ್ಥಳೀಯ ವಾಹನಗಳು ನಿತ್ಯವೂ ಮೂರ‍್ನಾಲ್ಕು ಬಾರಿ ಸಂಚರಿಸುವ ವೇಳೆ ಪ್ರತೀ ಬಾರಿ ಟೋಲ್ ಕಟ್ಟಿ ಸಾಗುವುದು ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸರ್ವೀಸ್ ರಸ್ತೆಗಳಿದ್ದು, ಆದರೆ ಈಗ ಇಂತಹ ರಸ್ತೆಯಲ್ಲಿ ಸಾಗುವುದಕ್ಕಿಂತ ಟೋಲ್ ಪಾವತಿಸಿ ಹೋಗುವುದೇ ಉತ್ತಮ ಎಂಬ ಸ್ಥಿತಿ ತಂದೊಡ್ಡಿದೆ ಎಂದು ಸ್ಥಳೀಯ ವಾಹನ ಮಾಲಕರು ತಿಳಿಸಿದ್ದಾರೆ.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
ವಾಹನಗಳು ಟೋಲ್ ತಪ್ಪಿಸಿಕೊಂಡು ಸರ್ವೀಸ್ ರಸ್ತೆಯಲ್ಲಿ ಸಾಗುತ್ತವೆ ಎಂಬ ಕಾರಣಕ್ಕೆಂದೇ ಈ ಹೊಂಡಗಳನ್ನು ರಾ.ಹೆ. ಪ್ರಾಧಿಕಾರವು ಹಾಗೇ ಬಿಟ್ಟಿದೆಯೇ ಎಂದು ಅನುಮಾನಾಸ್ಪದ ಚಿಂತನೆಗಳು ಜನರಲ್ಲಿ ಮೂಡುತ್ತಿದೆ. ಸ್ಥಳೀಯ ವಾಹನದವರು ಇದರಿಂದ ತೊಂದರೆ ಅನುಭವಿಸುವಂತಾಗಿದೆ.
ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ಸರ್ವೀಸ್ ರಸ್ತೆಯ ಹೊಂಡಗಳನ್ನು ಮುಚ್ಚಿ ಶಾಶ್ವತ ಪರಿಹಾರ ನೀಡುವಂತೆ ದ.ಕ.ಜಿಲ್ಲಾಧಿಕಾರಿಗಳು ಎನ್‌ಎಚ್‌ಎಐಗೆ ಸೂಚನೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.