ಟಿಯಾನ್ಜಿನ್ (ಚೀನಾ): ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ದೇಶಗಳ ಶಿರ್ಷ ಸಮ್ಮೇಳನದ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಸಭಾಂಗಣದಲ್ಲೇ ಇದ್ದ ಸಮಯದಲ್ಲಿ, ಪಹಲ್ಗಾಮ್ ಭಯೋತ್ಪಾದನಾ ದಾಳಿಯನ್ನು ಉದಾಹರಿಸಿ ಪಾಕಿಸ್ತಾನದ ʻಭಯೋತ್ಪಾದಕ’ ಚಟುವಟಿಕೆಗಳನ್ನು ಮೋದಿ ಖಂಡತುಂಡವಾಗಿ ಖಂಡಿಸಿದರು. ಅಲ್ಲದೆ ಚೀನಾದ ವಿರುದ್ಧವೂ ಪರೋಕ್ಷ ದಾಳಿ ನಡೆಸಿದರು.
“ಭಯೋತ್ಪಾದನೆ ಎನ್ನುವುದು ಮಾನವಕುಲಕ್ಕೆ ದೊಡ್ಡ ಸವಾಲು. ಇದರ ವಿರುದ್ಧ ಎಲ್ಲಾ ದೇಶಗಳು ಒಟ್ಟಾಗಿ ನಿಲ್ಲಬೇಕು. ಭಯೋತ್ಪಾದನೆ ಒಪ್ಪತಕ್ಕದ್ದಲ್ಲ. ಕೆಲವು ದೇಶಗಳು ಭಯೋತ್ಪಾದನೆಗೆ ನೀಡುತ್ತಿರುವ ಬಹಿರಂಗ ಬೆಂಬಲವನ್ನು ನಾವು ಎಂದಿಗೂ ಒಪ್ಪಲಾರೆವು ಎಂದು ಮೋದಿ ಹೇಳುವ ಮೂಲಕ ಚೀನಾಗೆ ಪರೋಕ್ಷ ಮಂಗಳಾರತಿ ಎತ್ತಿದರು. ಪಹಲ್ಗಾಮ್ ದಾಳಿಯ ನಂತರ ಭಾರತದ ಪಕ್ಷವಾಗಿ ನಿಂತ ಸ್ನೇಹಿತ ರಾಷ್ಟ್ರಗಳಿಗೂ ಕೃತಜ್ಞತೆ ಸಲ್ಲಿಸಿದರು.
ನಾಲ್ಕು ದಶಕಗಳಿಂದ ಭಾರತ ಭಯೋತ್ಪಾದನೆಯಿಂದ ಬಳಲುತ್ತಿದೆ. ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡು ಸಂಕಟಪಡುತ್ತಿದ್ದಾರೆ. ಪಹಲ್ಗಾಮ್ ದಾಳಿ ಮಾನವೀಯತೆಯ ಮೇಲೆ ನಡೆದ ಅತಿ ದೊಡ್ಡ ದಾಳಿ ಎಂದು ಮೋದಿ ಆರೋಪಿಸಿದರು.
ಚೀನಾ ನಿಲುವು ಖಂಡಿಸಿದ ಮೋದಿ!
ಚೀನಾದ ಟಿಯಾನ್ಜಿನ್‌ನಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಪಹಲ್ಗಾಂ ನಂತರ ನಡೆದ ಆಪರೇಷನ್ ಸಿಂಧೂರ ಸಮಯ ಪಾಕಿಸ್ತಾನ ಜೊತೆ ನಿಂತ ಚೀನಾದ ನಿಲುವನ್ನು ಮೋದಿ ಖಂಡಿಸಿದರು. ಇದು ಪಾಕ್ ಮಿತ್ರ ರಾಷ್ಟ್ರ ಚೀನಾ ಚೀನಾ-ಪಾಕ್ ಜೋಡಿಗೆ ಎಸೆದ ಸವಾಲೆಂದು ರಾಜತಾಂತ್ರಿಕ ವಲಯಗಳಲ್ಲಿ ವಿಶ್ಲೇಷಣೆಯಾಗುತ್ತಿದೆ. ಎಸ್‌ಸಿಒ ಸಂಮ್ಮೇಳನದ ಅಂತಿಮ ಜಂಟಿ ಹೇಳಿಕೆಯಲ್ಲಿ ಭಯೋತ್ಪಾದನೆಗೆ ವಿರುದ್ಧ ಎಲ್ಲರೂ ಜೊತೆಯಾಗಿ ನಿಲ್ಲುವ ನಿರ್ಣಯ ತೆಗೆದುಕೊಳ್ಳಲಾಯಿತು
ಚೀನಾ ಸೇರಿದಂತೆ ಎಲ್ಲಾ ಎಸ್‌ಸಿಒ ಸದಸ್ಯ ರಾಷ್ಟ್ರಗಳು ಭಾರತದ ಈ ನಿಲುವನ್ನು ಪೂರ್ಣವಾಗಿ ಬೆಂಬಲಿಸುತ್ತದಾ ಅಥವಾ ಪಾಕಿಸ್ತಾನದ ವಿರುದ್ಧ ʻಮೃದು’ ಧೋರಣೆ ಮುಂದುವರಿಸುತ್ತದೋ ಎನ್ನುವುದು ಇನ್ನುಳಿದಿರುವ ಕುತೂಹಲ.