ಮಂಗಳೂರು: ನಗರದ ಫಳ್ನೀರ್ ಆಸ್ಪತ್ರೆಗೆ ಸಮೀಪ ಭಾನುವಾರ ರಾತ್ರಿ ಸುಮಾರು 9.15ರ ಸುಮಾರಿಗೆ ಆಟೋ ಚಾಲಕನ ಮೇಲೆ ಅಪರಿಚಿತ ವ್ಯಕ್ತಿ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಶೀರ್ ಎಂಬ ಆಟೋ ಚಾಲಕನು ವಾಹನವನ್ನು ನಿಲ್ಲಿಸಿ ಮೂತ್ರ ಮಾಡುತ್ತಿದ್ದ ಸಂದರ್ಭದಲ್ಲಿ, ಒಬ್ಬ ಅಪರಿಚಿತ ವ್ಯಕ್ತಿ ಬ್ಯಾರೀ ಭಾಷೆಯಲ್ಲಿ ಮಾತನಾಡಿ, “ನೀನು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಇದರಿಂದ ಉಂಟಾದ ವಾಗ್ವಾದ ಜಗಳಕ್ಕೆ ತಿರುಗಿ, ಆ ವ್ಯಕ್ತಿ ಬಶೀರ್ ಅವರ ಬೆನ್ನಿನ ಭಾಗಕ್ಕೆ ಚುಚ್ಚಿ ಸಣ್ಣ ಗಾಯ ಮಾಡಿದ್ದಾರೆಂದು ತಿಳಿದುಬಂದಿದೆ. ತಕ್ಷಣ ಬಶೀರ್ ತಿರುಗೇಟು ನೀಡಿ ಆ ವ್ಯಕ್ತಿಯನ್ನು ತಳ್ಳಿದ ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಶೀರ್ ಅವರ ಹೇಳಿಕೆ ದಾಖಲಿಸಿದ್ದು, ಅಧಿಕೃತ ದೂರು ಆಧಾರದ ಮೇಲೆ ಪ್ರಕರಣ ದಾಖಲಿಸುವ ಕಾರ್ಯ ನಡೆಯುತ್ತಿದೆ. ಗಾಯ ತೀವ್ರವಾಗಿಲ್ಲವೆಂದು ವೈದ್ಯರು ತಿಳಿಸಿದ್ದಾಗಿ ಮಂಗಳೂರಿನ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.