ಬಂಟ್ವಾಳ : ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಅವಮಾನ ಮಾಡಿದ ಪ್ರಕರಣದಲ್ಲಿ 13 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಅಕ್ರ. 95/2025, ಸೆಕ್ಷನ್ 74, BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 26ರಂದು ರಾತ್ರಿ 7.30ರಿಂದ 8.00ರ ಅವಧಿಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಸ್ಕೂಟರ್‌ನಲ್ಲಿ ಬಂದ ಅಪರಿಚಿತನು ಅವಮಾನಕಾರಿ ಕೃತ್ಯ ಎಸಗಿದ್ದನು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಪ್ರಕರಣದ ಆರೋಪಿ ಪಾಣೆಮಂಗಳೂರು ನಿವಾಸಿ, ಪೋಷಕರೊಂದಿಗೆ ವಾಸವಾಗಿರುವ 13 ವರ್ಷದ ಬಾಲಕ ಎನ್ನುವುದನ್ನು ಸಾಕ್ಷ್ಯಾಧಾರಗಳಿಂದ ದೃಢಪಡಿಸಿದ್ದಾರೆ. ಪೊಲೀಸರು ಆತನನ್ನು ತಾಯಿಯ ಸಮ್ಮುಖ ವಿಚಾರಣೆ ನಡೆಸಿ ಬಾಲನ್ಯಾಯ ಮಂಡಳಿ ಮಂಗಳೂರು ಮುಂದೆ ಹಾಜರುಪಡಿಸಿದರು.
ಮಂಡಳಿಯ ಆದೇಶದಂತೆ ಬಾಲಕನನ್ನು ಸೆಪ್ಟೆಂಬರ್ 2ರವರೆಗೆ ಪರಿವೀಕ್ಷಣಾ ಮಂದಿರಕ್ಕೆ ಕಳುಹಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ.