ವಾಷಿಂಗ್ಟನ್: ಅಮೇರಿಕಾದ ಮಿನಿಯಾಪೊಲಿಸ್ ನಗರದಲ್ಲಿ ಬುಧವಾರ ಬೆಳಿಗ್ಗೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಇಬ್ಬರು ಮಕ್ಕಳ ಪ್ರಾಣ ಹೋದರೆ, 17 ಮಂದಿ ಗಾಯಗೊಂಡಿರುವ ಘಟನೆ ದೇಶವ್ಯಾಪಿ ಬೆಚ್ಚಿಬೀಳಿಸಿದೆ.
ಮಿನಿಯಾಪೊಲಿಸ್‌ನ ಅನುನ್ಸಿಯೇಷನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪ್ರಾರ್ಥನೆ ವೇಳೆ 23 ವರ್ಷದ ರಾಬಿನ್ ವೆಸ್ಟ್‌ಮನ್ ಎಂಬಾತ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಗುರುತಿಸಿದ್ದಾರೆ. ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಬಂದೂಕು, ಶಾಟ್‌ಗನ್ ಹಾಗೂ ಪಿಸ್ತೂಲ್‌ಗಳೊಂದಿಗೆ ಚರ್ಚ್‌ಗೆ ನುಗ್ಗಿದ ಆರೋಪಿ, ಮಕ್ಕಳಿಂದ ತುಂಬಿದ್ದ ಕುರ್ಚಿಗಳ ಮೇಲೆ ನೇರವಾಗಿ ಗುಂಡು ಹಾರಿಸಿದ್ದಾನೆ. 8 ಮತ್ತು 10 ವರ್ಷದ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರೆ, 14 ಮಕ್ಕಳು ಹಾಗೂ ಮೂವರು ವಯೋವೃದ್ಧರು ಗಾಯಗೊಂಡಿದ್ದಾರೆ.
ಘಟನೆಯ ಮುನ್ನ ಯೂಟ್ಯೂಬ್ ವಿಡಿಯೋ ಮಾಡಿದ್ದ ಆರೋಪಿ:
ಘಟನೆಯ ಕೆಲವೇ ಗಂಟೆಗಳ ಮುನ್ನ, ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಇಬ್ಬರು ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿತ್ತು. ನಂತರ ಅವುಗಳನ್ನು ಅಳಿಸಲಾಗಿದರೂ, ಅದರಲ್ಲಿದ್ದ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮೊದಲ ವಿಡಿಯೋದಲ್ಲಿ ಆತ್ಮಹತ್ಯಾ ಪತ್ರ, ಶಸ್ತ್ರಾಸ್ತ್ರಗಳು ಹಾಗೂ ದ್ವೇಷಪೂರಿತ ಬರಹಗಳನ್ನು ತೋರಿಸಲಾಗಿತ್ತು. ಮ್ಯಾಗಜೀನ್‌ಗಳ ಮೇಲೆ “Kill Donald Trump”, “nuke India” ಮೊದಲಾದ ಬರಹಗಳಿದ್ದವು. ಜಾತ್ಯತೀತ, ಧರ್ಮ ವಿರೋಧಿ ಟಿಪ್ಪಣಿಗಳೂ ಕಂಡುಬಂದಿದ್ದವು.
ಎರಡನೇ ವಿಡಿಯೋದಲ್ಲಿ ಸೈರಿಲಿಕ್ ಲಿಪಿಯಲ್ಲಿ ಬರೆದಿದ್ದ ಜರ್ನಲ್ ತೋರಿಸಿ, ಹಳೆಯ ಗುಂಡಿನ ದಾಳಿಗಳ ಪ್ರಸ್ತಾಪ ಮಾಡಲಾಗಿತ್ತು. ಜೊತೆಗೆ ಗುರಿಯಾಗಿದ್ದ ಚರ್ಚ್ ಕಟ್ಟಡದ ಚಿತ್ರವನ್ನು ಚೂರಿಯಿಂದ ಇರಿಯುವ ದೃಶ್ಯವೂ ದಾಖಲಾಗಿತ್ತು.
2013ರಲ್ಲಿ ವೆಸ್ಟ್‌ಮನ್ ಪೋಷಕರು ವಿಚ್ಛೇದನ ಪಡೆದಿದ್ದರು. ರಾಬಿನ್ ಮೂವರು ಮಕ್ಕಳಲ್ಲಿ ಕಿರಿಯರಾಗಿದ್ದರು. ಪೊಲೀಸರು ದಾಳಿಯ ಹಿಂದಿನ ಉದ್ದೇಶ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ತನಿಖೆ ಮುಂದುವರಿಕೆ
ಪೊಲೀಸರು ಈ ದಾಳಿಯನ್ನು ಹಿಂದಿನ ಕ್ರೈಸ್ಟ್‌ಚರ್ಚ್ (2019) ಹಾಗೂ ಬಫಲೋ (2022) ದಾಳಿಗಳ ಜೊತೆ ಹೋಲಿಸುತ್ತಿದ್ದಾರೆ. ಆರೋಪಿ ರಾಬಿನ್ ವೆಸ್ಟ್‌ಮನ್ ಜನನ ಹೆಸರಿನಲ್ಲಿ ರಾಬರ್ಟ್ ಪಾಲ್ ವೆಸ್ಟ್‌ಮನ್ ಆಗಿದ್ದು, 2020ರಲ್ಲಿ ಹೆಸರು ಬದಲಿಸಿಕೊಂಡಿದ್ದನು. ಆರೋಪಿ ಟ್ರಾನ್ಸ್‌ಜೆಂಡರ್ ಎಂದು ಪೊಲೀಸರು ದೃಢಪಡಿಸಿದರೂ, ದಾಳಿಯ ಉದ್ದೇಶಕ್ಕೆ ಅದರ ಸಂಬಂಧವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬಕ್ಕೆ ಬರೆದ ಪತ್ರ
ವಿಡಿಯೋದಲ್ಲಿ ಆರೋಪಿ ಕುಟುಂಬಕ್ಕೆ ಕ್ಷಮೆಯಾಚಿಸುವ ಆತ್ಮಹತ್ಯಾ ಪತ್ರವನ್ನೂ ತೋರಿಸಿದ್ದ. “ನನ್ನಿಂದ ನಿಮ್ಮ ಜೀವನ ಶಾಶ್ವತವಾಗಿ ಕಳಂಕಿತವಾಗುತ್ತದೆ” ಎಂದು ಪತ್ರದಲ್ಲಿ ಬರೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರತಿಕ್ರಿಯೆ
ಅಮೇರಿಕಾ ಗೃಹಸಚಿವ ಕ್ರಿಸ್ಟಿ ನೋಯಮ್, ಈ ವಿಡಿಯೋ ನಿಜವೆಂದು ದೃಢಪಡಿಸಿದ್ದು, “For the Children”, “Where is your God?”, “Kill Donald Trump” ಎಂಬ ಬರಹಗಳನ್ನು “ಅನಾರೋಗ್ಯಕರ ಮನಸ್ಸಿನ ಭಯಾನಕ ಕ್ರೌರ್ಯ” ಎಂದು ಖಂಡಿಸಿದ್ದಾರೆ.
ವೆಸ್ಟ್‌ಮನ್‌ರ ಹಿನ್ನೆಲೆ
ಕೋರ್ಟ್ ದಾಖಲೆಗಳ ಪ್ರಕಾರ, 2020ರಲ್ಲಿ ವೆಸ್ಟ್‌ಮನ್ ತನ್ನ ಹೆಸರನ್ನು ರಾಬರ್ಟ್‌ನಿಂದ ರಾಬಿನ್ ಎಂದು ಬದಲಿಸಿಕೊಂಡಿದ್ದನು. ಶಸ್ತ್ರಾಸ್ತ್ರಗಳನ್ನು ಕಾನೂನಾತ್ಮಕವಾಗಿ ಖರೀದಿಸಿದ್ದ ಆತ, ಹಿಂದೆಯೇ ಯಾವುದೇ ಅಪರಾಧ ಪ್ರಕರಣ ಹೊಂದಿರಲಿಲ್ಲ.
ರಾಷ್ಟ್ರ ಶೋಕಾಚರಣೆ
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶಾದ್ಯಂತ ಅಮೇರಿಕಾ ಧ್ವಜವನ್ನು ಅರ್ಧಕಂಬದಲ್ಲಿ ಹಾರಿಸಲು ಆದೇಶಿಸಿ ಶೋಕಾಚರಣೆಗೆ ಕರೆದಿದ್ದಾರೆ. ಅಮೇರಿಕಾದಲ್ಲಿ ಈ ವರ್ಷ ಜನವರಿಯಿಂದ ಇಂತಹ ಶಾಲಾ ಗುಂಡಿನ ದಾಳಿಯ ಇದು 146ನೇ ಪ್ರಕರಣವಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ.