ಜೋಧ್‌ಪುರ್: ರಾಜಸ್ಥಾನದ ಜೋಧ್‌ಪುರದಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ಉಪನ್ಯಾಸಕಿಯೊಬ್ಬರು ತಮ್ಮ ಮೂರು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸಂಜು ಬಿಷ್ಣೋಯ್ (28) ಅವರು ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಸಂಜು ಗಂಭೀರವಾಗಿ ಸುಟ್ಟು ಚಿಕಿತ್ಸೆ ಪಡೆಯುತ್ತಿದ್ದರೂ ಶನಿವಾರ ಮೃತಪಟ್ಟಿದ್ದಾರೆ.
ಘಟನೆ ಜೋಧ್‌ಪುರದ ದಂಗಿಯಾವಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್‌ನಾದಾ ಗ್ರಾಮದಲ್ಲಿ ನಡೆದಿದೆ. ನೆರೆಹೊರೆಯವರು ಮನೆಯಲ್ಲಿ ಹೊಗೆ ಎದ್ದದ್ದು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ವಶಪಡಿಸಿಕೊಂಡ ಆತ್ಮಹತ್ಯೆ ಪತ್ರದಲ್ಲಿ ಪತಿ ದಿಲೀಪ್ ಬಿಷ್ಣೋಯ್ ಹಾಗೂ ಅತ್ತೆ-ಮಾವ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದರೆಂದು ಮಹಿಳೆ ದೂರಿದ್ದಾರೆ. ಗಣಪತ್ ಸಿಂಗ್ ಎಂಬಾತನ ವಿರುದ್ಧವೂ ದೈಹಿಕ ಕಿರುಕುಳದ ಆರೋಪ ಮಾಡಲಾಗಿದೆ.
ಮೃತರ ಪೋಷಕರ ದೂರು ಆಧಾರವಾಗಿ ಪತಿ ಮತ್ತು ಅತ್ತೆ-ಮಾವ ವಿರುದ್ಧ ಪ್ರಕರಣ ದಾಖಲಾಗಿದೆ. ಎಫ್‌ಎಸ್‌ಎಲ್ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಮೊಬೈಲ್ ಫೋನ್ ಸೇರಿದಂತೆ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.