ಕಾರ್ಕಳ: ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆದು ಬ್ರಹ್ಮಾವರ ಠಾಣೆಗೆ ಕರೆತರುತ್ತಿರುವ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕಾರಿಗೆ ಗುದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಉಜಿರೆಯ ನಿವಾಸಿಗಳಾದ ಸೃಜನ್ ಎಲ್., ಹಿತೇಶ್ ಶೆಟ್ಟಿ ಹಾಗೂ ಸಹನ್ ಬಂಧಿತ ಆರೋಪಿಗಳು.
ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಪೊಲೀಸರು ಉಜಿರೆಯಿಂದ ಬ್ರಹ್ಮಾವರಕ್ಕೆ ಕರೆತರುತ್ತಿದ್ದರು. ಆಗ ಅವರ ಬೆಂಬಲಿಗರ ಪೈಕಿ ಕೆಲವರು ಪೊಲೀಸ್ ವಾಹನಗಳನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಪೊಲೀಸರು ಎಷ್ಟೇ ಸೂಚನೆ ನೀಡಿದರೂ ಕೇಳದ ಬೆಂಬಲಿಗರು ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಹಿಂಬಾಲಿಸಿದ್ದಾರೆ. ಅಲ್ಲದೆ ಉಡುಪಿ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಇಲಾಖಾ ವಾಹನ ನಂಬರ್ ಕೆಎ 20 ಜಿ 0669ಕ್ಕೆ ಗುದ್ದಿ, ಆರೋಪಿಗಳನ್ನು ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗದಂತೆ ಅಡ್ಡಿಪಡಿಸಿದ್ದಾರೆ ಎಂದು ಈ ಮೂವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.