ತಿಮರೋಡಿ ಮೇಲಿದೆ ಜಾಮೀನು ರಹಿತ ಕೇಸ್!: ʻವಶʼ ರಹಸ್ಯ ಬಿಚ್ಚಿಟ್ಟ ಎಸ್‌ಪಿ

ಉಡುಪಿ: ಮಹೇಶ್ ಶೆಟ್ಟಿ ತಿಮರೋಡಿ ʻಪುನರಾವರ್ತಿತ ಆರೋಪಿ’ ಆಗಿದ್ದು, ಇವರ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಎರಡು ಬಾರಿ ವಾರೆಂಟ್ ಜಾರಿ ಮಾಡಿದ್ದರೂ ಪೊಲೀಸ್ ಠಾಣೆಗೆ ಹಾಜರಾಗಿರಲಿಲ್ಲ. ಪೊಲೀಸರ ನೊಟೀಸ್‌ಗೂ ಉತ್ತರಿಸದ ಹಿನ್ನೆಲೆಯಲ್ಲಿ ಮನೆಗೆ ಬಂದು ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆ ಬಳಿ ಭಾರೀ ಜನಸಂದಣಿಗೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಬ್ರಹ್ಮಾವರ ಆಸುಪಾಸಿನ ರಸ್ತೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಠಾಣೆಯ ಸುತ್ತಲೂ ವಾಹನ ಮತ್ತು ಜನರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆ ಹೆಚ್ಚಿಸಲಾಗಿದೆ. ಗುಂಪು ಸೇರುವುದು ಅಥವಾ ಪ್ರತಿಭಟನೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಎಸ್.ಪಿ. ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದಾರೆ.

ಎಸ್‌ಪಿ ಹರಿರಾಮ್ ಶಂಕರ್ ಹೇಳಿದಿಷ್ಟು:
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆದಿರುವುದನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಖಚಿತಪಡಿಸಿದ್ದಾರೆ. ತಿಮರೋಡಿ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿದ ಎರಡು ನೋಟಿಸ್‌ಗಳಿಗೆ ಅವರು ಸೂಕ್ತ ಉತ್ತರ ನೀಡದಿರುವುದು, ಹಾಗೂ ಅವರು ಈ ಹಿಂದೆ ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು, ಅಂದರೆ ಅವರು ‘ಪುನರಾವರ್ತಿತ ಆರೋಪಿ’ ಆಗಿರುವುದು ಅವರನ್ನು ವಶಕ್ಕೆ ಪಡೆಯಲು ಪ್ರಮುಖ ಕಾರಣಗಳಾಗಿವೆ ಎಂದು ಎಸ್.ಪಿ. ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಅಡ್ಡಿಯಾದರೆ ಕ್ರಮ:
ತಿಮರೋಡಿ ಅವರನ್ನು ಬ್ರಹ್ಮಾವರ ಠಾಣೆಗೆ ಕರೆತರುವ ಸುದ್ದಿ ತಿಳಿದು, ಅವರ ಬೆಂಬಲಿಗರು ಹಾಗೂ ಧರ್ಮಸ್ಥಳ ಸ್ವ-ಸಹಾಯ ಸಂಘದ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಠಾಣೆಯ ಆಸುಪಾಸಿನಲ್ಲಿ ಜಮಾಯಿಸಿದರು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾದರು. ನೆರೆದಿದ್ದ ಜನರನ್ನು ಅಲ್ಲಿಂದ ತೆರಳುವಂತೆ ಸೂಚನೆ ನೀಡಿದರು ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

error: Content is protected !!