ಮಂಗಳೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸರು ವಶಕ್ಕೆ ಪಡೆಯಲು ಮುಂದಾಗ ಅವರ ಉಜಿರೆಯ ನಿವಾಸದಲ್ಲಿ ಭಾರೀ ಹೈಡ್ರಾಮಾ ನಡೆಯಿತು.
ತಿಮರೋಡಿಯವನ್ನು ಪೊಲೀಸರು ವಶಕ್ಕೆ ಪಡೆಯುವ ವೇಳೆ ಅವರ ಬೆಂಬಲಿಗರು ʻʻಜಸ್ಟೀಸ್ ಫಾರ್ ಸೌಜನ್ಯʼ, ಸೌಜನ್ಯಳಿಗೆ ನ್ಯಾಯ ಸಿಗಬೇಕು, ʻಭಾರತ ಮಾತಕೀ ಜೈʼ ಎಂದೆಲ್ಲಾ ಎಂದು ಘೋಷಣೆ ಕೂಗಿದರು. ತಿಮರೋಡಿ ಜೀಪಿನಲ್ಲಿ ಕುಳಿತುಕೊಳ್ಳುವಾಗ ಮಾಧ್ಯಮ ಪ್ರತಿನಿಧಿಗಳು ಅವರ ಹೇಳಿಕೆ ಪಡೆಯಲು ಮುಂದಾದಾಗ, ʻಸೌಜನ್ಯಳಿಗೆ ನ್ಯಾಯ ಸಿಗಬೇಕು; ಎಂದಷ್ಟೇ ಹೇಳಲು ಸಾಧ್ಯವಾಗಿದ್ದು, ಮುಂದಕ್ಕೆ ಮಾತನಾಡಲು ಅವರಿಗೆ ಪೊಲೀಸರು ಅವಕಾಶ ನೀಡಲಿಲ್ಲ.
ಉಜಿರೆ ನಿವಾಸದಲ್ಲಿ ವಾಗ್ವಾದ!
ಪೊಲೀಸರು ಮನೆಯನ್ನು ಶೋಧಿಸಲು ಬಂದಿರುವುದಾಗಿ ತಿಳಿಸಿದಾಗ, ತಿಮರೋಡಿ ಪರ ವಕೀಲರು ಶೋಧ ವಾರೆಂಟ್ ನೀಡುವಂತೆ ಆಗ್ರಹಿಸಿದರು. ಅಲ್ಲದೆ, ಬ್ರಹ್ಮಾವರ ಠಾಣೆಗೆ ತಿಮರೋಡಿ ಅವರೇ ವಿಚಾರಣೆಗೆ ಹಾಜರಾಗುವುದಾಗಿ ವಕೀಲರು ಪೊಲೀಸರಿಗೆ ತಿಳಿಸಿದರು. ಆದರೆ ಪೊಲೀಸರು, “ನಾವೇ ಅವರನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಪಟ್ಟು ಹಿಡಿದರು. ಈ ವೇಳೆ, ಮನೆಯೊಳಗಡೆ ತಿಮರೋಡಿ ಪತ್ನಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು, ವಕೀಲರು ಹಾಗೂ ಪೊಲೀಸರ ಮಧ್ಯೆಯೂ ಕೆಲಕಾಲ ಚರ್ಚೆ ನಡೆಯಿತು.
ಚರ್ಚೆಯ ಬಳಿಕ, ತಿಮರೋಡಿ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲು ತೀರ್ಮಾನಿಸಲಾಯಿತು. ಪೊಲೀಸರು ಖಾಸಗಿ ಕಾರಿನಲ್ಲಿ ಮಹೇಶ್ ಶೆಟ್ಟಿ ಅವರನ್ನು ಬ್ರಹ್ಮಾವರ ಠಾಣೆಗೆ ಕರೆದೊಯ್ದು, ಅಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ. ವಿಚಾರಣೆಯ ನಂತರ ಅವರನ್ನು ಬಂಧಿಸಬೇಕೇ ಅಥವಾ ಇಲ್ಲವೇ ಎನ್ನುವುದು ನಿರ್ಧಾರವಾಗಲಿದೆ.
ಬಿಜೆಪಿ ನಾಯಕ ಬಿ.ಎಲ್. ಸಂತೋಷ್‌ರನ್ನು ನಿಂದನೆ ಮಾಡಿದ ಆರೋಪದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಅವರನ್ನು ಉಡುಪಿಯ ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಕೂಡಾ ಕಾರಿನಲ್ಲಿ ತೆರಳಿದ್ದಾರೆ.
ಮಣಿಪಾಲ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಡಿವೈಎಸ್ಪಿ ಡಿ.ಟಿ. ಪ್ರಭು, ಬ್ರಹ್ಮಾವರ ಇನ್ಸ್‌ಪೆಕ್ಟರ್ ಗೋಪಿ ಕೃಷ್ಣ ಮತ್ತು ಕಾರ್ಕಳ ಗ್ರಾಮಾಂತರ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್ ಸೇರಿದಂತೆ ನಾಲ್ಕೈದು ಇನ್ಸ್‌ಪೆಕ್ಟರ್‌ಗಳ ತಂಡ ಬಿಗಿ ಭದ್ರತೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಉಜಿರೆಯ ಮನೆಗೆ ಭೇಟಿ ನೀಡಿತ್ತು.