ಮಂಗಳೂರು: ಇಸ್ಕಾನ್ ಮಂಗಳೂರಿನ ಶ್ರೀಕೃಷ್ಣ ಬಲರಾಮ ಮಂದಿರದಿಂದ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಯಶಸ್ವಿಯಾಗಿ ನಡೆದಿದ್ದು, ಜನರಿಗೆ ಆಧ್ಯಾತ್ಮಿಕ ಅನುಭೂತಿಯನ್ನು ನೀಡಿದೆ. ಮುಂದಿನ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ಮೂಲಕ ಬ್ರಾಂಡ್ ಮಂಗಳೂರನ್ನು ಕೃಷ್ಣಮಯವನ್ನಾಗಿ ಜನರಲ್ಲಿ ಕೃಷ್ಣ ಪ್ರಜ್ಞೆ ಮೂಡಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಗುಣಾಕರ ರಾಮ ದಾಸ ಹೇಳಿದರು.
ಇಸ್ಕಾನ್ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಆಗಸ್ಟ್ 15 ಮತ್ತು 16 ರಂದು ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಒಟ್ಟೂ 20,000ಕ್ಕೂ ಹೆಚ್ಚು ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ 30 ಅಡಿ ಎತ್ತರದ ಬಾಲಕೃಷ್ಣನ ಭವ್ಯ ಭಿತಿಚಿತ್ರ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಇದು ಭಕ್ತರಲ್ಲಿ ಭಕ್ತಿಭಾವನೆ ಮೂಡಿಸಿತು. ಅಳ್ವಾಸ್ ಸಂಸ್ಥೆಯ ಪ್ರಸಿದ್ಧ ತಂಡದಿಂದ ನಡೆದ ಶ್ರೀಕೃಷ್ಣ ವೈಭವಂ ಎಂಬ ನೃತ್ಯ-ನಾಟಕ ಕಾರ್ಯಕ್ರಮ, ಶ್ರೀಕೃಷ್ಣನ ಲೀಲಾ ಕಥಾನಕಗಳನ್ನು ಮನಮೋಹಕವಾಗಿ ಚಿತ್ರಿಸುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿತು. ಮಧ್ಯರಾತ್ರಿಯ ಅಭಿಷೇಕ ಮತ್ತು ಆರತಿ, ಅದಕ್ಕೆ ಸಾಥ್ ನೀಡಿದ ವೇದಘೋಷ, ಭಕ್ತಿಮಯ ಮಂತ್ರಘೋಷಗಳು-ಇವು ಸಂಪೂರ್ಣ ಸ್ಥಳವನ್ನು ಭಕ್ತಿಭಾವಪೂರ್ಣವಾಗಿಸಿದವು. ಸಹಸ್ರಾರು ಭಕ್ತರು ಆಶ್ಚರ್ಯಚಕಿತರಾಗುವಂತೆ ಈ ಆಧ್ಯಾತ್ಮಿಕ ಅನುಭವವನ್ನು ಅನುಭವಿಸಿದರು ಎಂದು ಹೇಳಿದರು.
ಲೈವ್ ಆಹಾರ ಕೌಂಟರ್‌ಗಳು ಈ ಬಾರಿ ವಿಶೇಷ ಆಕರ್ಷಣೆಯಾಗಿದ್ದು, ಓಷನ್ ಪರ್ಲ್, ಐಡಿಯಲ್ ಐಸ್ ಕ್ರೀಂ, ಹ್ಯಾಂಗ್ಯೂ ಐಸ್ ಕ್ರೀಂ ಮುಂತಾದ ಮಂಗಳೂರು ನಗರದ ಹೆಸರಾಂತ ಬ್ರಾಂಡ್‌ಗಳೊಂದಿಗೆ, ದೇವಸ್ಥಾನದಿಂದ ನೇರವಾಗಿ ಒದಗಿಸಲಾದ ಲೈವ್ ಪ್ರಸಾದ ಸೇವೆ ಭಕ್ತರಲ್ಲಿ ದೊಡ್ಡ ಮೆಚ್ಚುಗೆ ಪಡೆದುಕೊಂಡಿತು. ಎಲ್ಲಾ ಭಕ್ತರಿಗೆ ಉಚಿತ ಪ್ರಸಾದ ವಿತರಣೆ ಮಾಡಲಾಯಿತು. ಭಕ್ತಿಭಾವಪೂರ್ಣ ಉಯ್ಯಾಲೆ ಸೇವೆ ಹಾಗೂ ಶ್ರೀಕೃಷ್ಣನ ದರ್ಶನದ ಮೂಲಕ ಜನತೆ ಶಾಂತಿಯ ಅನುಭವ ಪಡೆದರು, ಸುಮಾರು 20ಕ್ಕೂ ಅಧಿಕ ಸೋಷಿಯಲ್ ಮೀಡಿಯಾ ಇನ್ಫ್ಲ್ಯುಂಜರ್‌ಗಳು ನಮಗೆ ಸಹಕಾರ ನೀಡಿದರು ಎಂದರು.
ಮುಂದಿನ ಅಕ್ಟೋಬರ್ 2ರಿಂದ ನವೆಂಬರ್ 5ರ ತನಕ ಕಾರ್ತಿಕ ದೀಪೋತ್ಸವ ನಡೆಯಲಿದೆ. ಅಕ್ಟೋಬರ್ 22ರಿಂದ ಬೆಂಜನಪದವು ಗೋವರ್ಧನಗಿರಿ ಬೆಟ್ಟದಲ್ಲಿ ಗೋವರ್ಧನ ಪೂಜೆ ನಡೆಯಲಿದೆ. ಬೆಂಜನಪದವಿನಲ್ಲಿ 11 ಎಕ್ರೆ ಜಾಗದಲ್ಲಿ ಭವ್ಯ ಇಸ್ಕಾನ್ ದೇಗುಲ ನಿರ್ಮಾಣವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಗುಣಾಕರ ರಾಮ ದಾಸ ಪ್ರಕಟಿಸಿದರು.
ಇಸ್ಕಾನ್ ಮಂಗಳೂರು ಉಪಾಧ್ಯಕ್ಷ ಸನಂದನ ದಾಸ ಮಾತಾಡಿ, ನಮ್ಮ ಧಾರ್ಮಿಕ ಕಾರ್ಯಕ್ರಮಕ್ಕೆ ಶಾಸಕ ವೇದವ್ಯಾಸ ಕಾಮತ್, ಡಾ. ಎಂ. ಮೋಹನ್ ಆಳ್ವಾ ಎಂಬಿ ಪುರಾಣಿಕ್, ಸಮೀರ್ ಪುರಾಣಿಕ್. ಸಂಸದ ಬ್ರಿಜೇಶ್ ಚೌಟ, ಪ್ರಮೋದ್ ಮಧ್ವರಾಜ್, ರಾಜೇಂದ್ರ ಕುಮಾರ್, ಬ್ಲಾಗರ್‌ಗಳು, ಪೊಲೀಸರು, ವಿದ್ಯಾರ್ಥಿಗಳು ಮುಂತಾದವರು ತುಂಬುಹೃದಯದ ಸಹಕಾರ ನೀಡಿದ್ದಾರೆ ಅವರಿಗೆ ಕೃತಜ್ಞತೆಗಳು ಎಂದರು.
ಇಸ್ಕಾನ್ ಮಂಗಳೂರಿನ ಕೋ-ಆರ್ಡಿನೇಟರ್ ಸುಂದರ ಗೌರ ದಾಸ ಉಪಸ್ಥಿತರಿದ್ದರು.