ಮಂಗಳೂರು: ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಉರ್ವಸ್ಟೋರ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಆ.15ರಂದು ನಡೆಯಿತು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ರಾಕೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ,ಒಂದು ಕಾಲದಲ್ಲಿ ಅನೇಕ ರಾಜ ಸಂಸ್ಥಾನಗಳು ಆಳ್ವಿಕೆ ನಡೆಸುತ್ತಿದ್ದ ಭಾರತ ದೇಶದಲ್ಲಿ ಸ್ವಾತ್ರಂತ್ರ್ಯ ಬಳಿಕ ಕಳೆದ 79 ವರ್ಷಗಳಿಂದ ತ್ರಿವರ್ಣ ಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿ ಗೌರವಿಸುತ್ತಾ ಸಂವಿಧಾನದ ಚೌಕಟ್ಟಿನಲ್ಲಿ ಭಾರತೀಯರೆಲ್ಲರೂ ಸಮಾನರಾಗಿ ನಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಆರ್ಥಿಕವಾಗಿ ಹಿಂದುಳಿದಿದ್ದರೂ ಸ್ವಾತಂತ್ರ್ಯ ನಂತರ ಭಾರತವು ಎಲ್ಲಾ ರಂಗಗಳಲ್ಲಿ ಮುಂದುವರೆದು ಬಲಿಷ್ಠ ರಾಷ್ಟ್ರವಾಗಿ ಎದ್ದು ನಿಂತಿದೆ ಎಂದರು.
ಅಶೋಕ್ ಅಂಚನ್ ಕೋಡಿಕಲ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಾ ನಿರ್ದೇಶಕರಾದ ಉಷಾ ಸ್ವಾಗತಿಸಿದರು. ಕಾರ್ಯದರ್ಶಿ ಯಶವಂತ್ ಪೂಜಾರಿ ಉಳಾಯಿಬೆಟ್ಟು ಧನ್ಯವಾದ ನೀಡಿದರು. ಪ್ರಥಮ ಉಪಾಧ್ಯಕ್ಷರಾದ ಹರೀಶ್ ಕೆ ಪೂಜಾರಿ ನಿರೂಪಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ನಾಗೇಶ್ ಅಮೀನ್ ಮುಲ್ಲಾಕಾಡ್ ಪ್ರಾರ್ಥನೆ ಗೀತೆ ಹಾಡಿದರು.
ಘಟಕದ ಮಾಜಿ ಅಧ್ಯಕ್ಷರು, ಹೆಚ್ಚಿನ ಸದಸ್ಯರು ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.