ಬೆಂಗಳೂರು: ಬಸವಣ್ಣನವರ ಧ್ಯೇಯದಂತೆ ನಮ್ಮ ಸರ್ಕಾರ ನಡೆಯುತ್ತಿದ್ದು, ನಮ್ಮ ಸರ್ಕಾರ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳನ್ನು ಶುಕ್ರವಾರ ಕೊಂಡಾಡಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿಗಳು ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು.
ಭಾಷಣದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಮೆರೆಯಲಾಗದು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಬಲಿದಾನಕ್ಕೆ ಬೆಲೆಕಟ್ಟಲಾಗದು ಎಂದು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. 5 ಗ್ಯಾರಂಟಿ ಗಳಿಂದ 96 ಸಾವಿರ ಕೋಟಿಗೂ ಹೆಚ್ಚು ಹಣವನ್ನೆ ನೀಡಿದ್ದೇವೆ. ಶಕ್ತಿಯೋಜನೆ ಮಹಿಳೆಯರಿಗೆ ಸಹಾಯಕವಾಗಿದೆ. ಯೋಜನೆಗಾಗಿ 5900 ಹೊಸ ಬಸ್ಸುಗಳನ್ನು ಖರೀದಿ ಮಾಡಿದ್ದೇವೆ. ಮಧ್ಯವರ್ತಿಗಳ ಹಾವಳಿಯಿಲ್ಲದೇ ತಲಾದಾಯ ಹೆಚ್ಚಾಗಿದೆ ಎಂದು ತಿಳಿಸಿದರು.
ತಲಾದಾಯದಲ್ಲಿ ಕರ್ನಾಟಕ ದೇಶದಲ್ಲೇ ಮೊದಲಿದೆ. ಕಳೆದ ಹತ್ತು ವರ್ಷಗಳಲ್ಲಿ ಶೇಕಡಾ 101 ರಷ್ಟು ಪ್ರಗತಿ ಸಾಧಿಸಿದೆ. 2013-14 ರಲ್ಲಿ ಸ್ಥಿರ ದರಗಳಲ್ಲಿ 1,01,858 ರೂಪಾಯಿಗಳಷ್ಟಿತ್ತು. ಈಗ 2024-25ರ ವೇಳೆಗೆ 2,04,605 ರೂಪಾಯಿ ತಲುಪಿದೆ ಎಂದು ಹೇಳಿದರು.
ನುಡಿದಂತೆ ನಡೆಯಬೇಕೆಂಬ ಧ್ಯೇಯ ವಾಕ್ಯದ ಮೂಲಕ ನಮ್ಮ ಸರ್ಕಾರ ತನ್ನದೇ ಆದ ಅಭಿವೃದ್ಧಿ ಮಾದರಿಗಳನ್ನು ನಿರ್ಮಿಸಿದೆ. ಇದಕ್ಕೆ ಕರ್ನಾಟಕ ಅಭಿವೃದ್ಧಿ ಮಾದರಿ ಎಂಬ ಹೆಸರಿನಲ್ಲಿ ಮನ್ನಣೆ ದೊರೆತಿರುವುದು ಹೆಮ್ಮೆಯ ಸಂಗತಿ. ವಿಶ್ವಸಂಸ್ಥೆಯ ಮುಖ್ಯಸ್ಥರಾದ ಫಿಲೆಮನ್ ಯಾಂಗ್ ರವರು ಕರ್ನಾಟಕಕ್ಕೆ ಬಂದು, ನಮ್ಮ ಗ್ಯಾರಂಟಿ ಯೋಜನೆಗಳನ್ನ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಕೃಷಿ ವಲಯಕ್ಕೆ 2025-26ರ ಬಜೆಟ್ ನಲ್ಲಿ 51,339 ಕೋಟಿ ಒದಗಿಸಿದ್ದೇವೆ. 2022-23ಕ್ಕೆ ಹೋಲಿಸಿದರೆ ಶೇಕಡಾ 52.34 ರಷ್ಟು ಅನುದಾನವನ್ನು ಕೃಷಿಗೆ ಕೊಟ್ಟಿದ್ದೇವೆ. ನಮ್ಮ ಮೊದಲ ಆದ್ಯತೆ ಕೃಷಿ ಎಂದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಇಷ್ಟೆಲ್ಲಾ ಜನ ಕಲ್ಯಾಣ ಕಾರ್ಯಕ್ರಮಗಳ ನಡುವೆಯೂ ನಮಗೆ ಬೇಕಾಗಿರುವಷ್ಟು ಯೂರಿಯಾವನ್ನು ಕೇಂದ್ರ ಸರ್ಕಾರ ಪೂರೈಸುತ್ತಿಲ್ಲ. ಇದರಿಂದ ಸ್ವಲ್ಪ ಸಮಸ್ಯೆಗಳು ಉಂಟಾಗಿವೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸುತ್ತೇನೆಂದು ಹೇಳಿದರು.