ಕಾವೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳನ್ನೇ ಪ್ರಶ್ನಿಸುವ ಕಾಂಗ್ರೆಸ್ ಮುಖಂಡರ ಮನಸ್ಥಿತಿ, ಹಾಗೂ ಅವರ ನಕಲಿ ಜಾತ್ಯತೀತತೆಯನ್ನು ಜನರು ಅರಿತುಕೊಳ್ಳುವ ಸಮಯ ಬಂದಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದ್ದಾರೆ.
ಪ್ರಪಂಚಕ್ಕೆ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳು ಮನುಕುಲದ ಸಮಗ್ರ ಏಳಿಗೆಗೆ ದಾರಿ ದೀಪವಾಗಿದೆ. ಹಿಂದೂ ಸಮಾಜ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ದೇವಮಾನ ರೂಪದಲ್ಲಿ ಕಾಣುವಾಗ ಗುರುಗಳ ಹೆಸರೆತ್ತುವ ಯೋಗ್ಯತೆ ಇಲ್ಲದ ಕಾಂಗ್ರೆಸ್ ಮುಖಂಡನೊಬ್ಬ ಗುರುಗಳಿಗೆ ಅಪಮಾನ ಮಾಡುವ ಕೆಲಸವನ್ನು ಮಾಡಿದ್ದಾರೆ.
ಕೇವಲ ಒಂದು ಜಾತಿ ಪಂಗಡಕ್ಕೆ ಸೀಮಿತವಾಗದೆ ಪೂರ್ತಿ ಸಮಾಜದ ಒಳಿತು ಬಯಸಿ, ಮಾನವ ಕುಲದ ಉದ್ಧಾರದ ಸಂದೇಶ ಸಾರಿದಂತಹ ಮಹಾನ್ ವ್ಯಕ್ತಿತ್ವ ಶ್ರೀ ನಾರಾಯಣ ಗುರುಗಳದ್ದು.
ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಉಪಯೋಗಿಸಿ ತಮ್ಮ ನಿಲುವನ್ನು ಹೇಳಿದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡ ಮಹಮ್ಮದ್ ಅಲಿ ಎಂಬಾತ ‘ನಿಮ್ಮನ್ನು ಮಂತ್ರಿ ಮಾಡಿದ್ದು ನಾರಾಯಣಗುರುಗಳ ಸಿದ್ಧಾಂತವೋ’ ಎಂಬ ಪ್ರಶ್ನೆಯನ್ನು ಮಾಡಿ ಉಡಾಫೆಯ ಮಾತುಗಳ ನಾಡಿರುವುದು ಹಿಂದೂ ಸಮಾಜಕ್ಕೆ ಅತೀವ ನೋವನ್ನುಂಟು ಮಾಡಿದೆ. ತಕ್ಷಣ ಕಾಂಗ್ರೆಸ್ ಪಕ್ಷ ಆ ವ್ಯಕ್ತಿಯನ್ನು ವಜಾಗೊಳಿಸಬೇಕು, ಹಾಗೂ ಸಮಾಜದ ಕ್ಷಮೆಯನ್ನು ಯಾಚಿಸಬೇಕು ಎಂದು ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.