ಮಂಗಳೂರು: ಕಂದಾವರ ಪಂಚಾಯತ್‌ನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಬೆಂಬಲಿತರು ಯಾರಿಗೂ ಒಂದು ಮನೆಯನ್ನೂ ಕಟ್ಟಿ ಕೊಟ್ಟಿಲ್ಲ. ಹಕ್ಕುಪತ್ರ ಪಡೆದುಕೊಂಡವರನ್ನು ಸತಾಯಿಸಲಾಗುತ್ತಿದೆ. ನಾವು ಕೊಟ್ಟ ಹಕ್ಕುಪತ್ರವನ್ನು ಮಗದೊಮ್ಮೆ ಫಲಾನುಭವಿಗಳನ್ನು ಕರೆಸಿ ಹಕ್ಕುಪತ್ರವನ್ನು ನೀಡುವಂತಹ ನಾಟಕವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, 2018ರಲ್ಲಿ ಸರ್ವೆ ನಂ: 135/3 ರಲ್ಲಿ ಕೌಡೂರು ಎಂಬಲ್ಲಿ ನಿವೇಶನಕ್ಕೆ ಕಾಯ್ದಿರಿಸಿದ ಜಾಗದಲ್ಲಿ 189 ಹಕ್ಕುಪತ್ರಗಳನ್ನು ಅಂದಿನ ಶಾಸಕ ಮೊದಿನ್ ಬಾವಾ, ನಾನು ಅಧ್ಯಕ್ಷೆಯಾಗಿದ್ದಾಗ ಹಕ್ಕು ಪತ್ರ ವಿತರಣೆ ಮಾಡಿದ್ದೆವು. ಆದರೆ ಪ್ರಸ್ತುತ ಆಡಳಿತ ನಡೆಸುತ್ತಿರುವ ಬಿಜೆಪಿ ಬೆಂಬಲಿತರು ಯಾರಿಗೂ ಒಂದು ಮನೆಯನ್ನೂ ಕಟ್ಟಿ ಕೊಟ್ಟಿಲ್ಲ. ಹಕ್ಕುಪತ್ರ ಪಡಕೊಂಡವರಿಗೆ ಮೂಲ ಸೌಕರ್ಯವನ್ನು ಒದಗಿಸುವುದು ಕ್ಷೇತ್ರದ ಶಾಸಕರ ಕರ್ತವ್ಯ ಎಂದು ವಿಜಯ ಹೇಳಿದರು.
ಬಿಜೆಪಿ ಬೆಂಬಲಿತರ ಈ ಅವಧಿಯಲ್ಲಿ ಮೂರು ಜನ ಪರಿಶಿಷ್ಠ ಜಾತಿಯ ಪಂಪು ಚಾಲಕರನ್ನು ಕೆಲಸದಿಂದ ಕಿತ್ತುಹಾಕಿ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಾರೆ. ಚೆನ್ನಪ್ಪ ಎನ್ನುವವರು ಕಳೆದ ಇಪ್ಪತ್ತು ವರ್ಷಗಳಿಂದ ಪಂಪುಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಏಕಾ ಏಕಿ ಕೆಲಸದಿಂದ ತೆಗೆದಿದ್ದಾರೆ. ಅದೇ ರೀತಿ ಶ್ರೀನಿವಾಸ, ನಾಗಪ್ಪ ಮೂರು ಮಂದಿ ಪರಿಶಿಷ್ಟ ಜಾತಿಯವರನ್ನು ಕೆಲಸದಿಂದ ವಜಾಮಾಡಿ ದಲಿತ ವಿರೋದಿ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿದರು.
ಕಂದಾವರ ಗ್ರಾಮ ಪಂಚಾಯಯತ್‌ನ ಕೊಳಂಬೆ ಗ್ರಾಮದ ಸೌಹಾರ್ದನಗರದ ನಿವಾಸಿಗಳು ವಿಮಾನ ನಿಲ್ದಾಣಕ್ಕೆ ಭೂಮಿ ಕಳಕೊಂಡ ನಿರ್ವಸಿತರಾಗಿದ್ದಾರೆ. ಆದರೆ ಇಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡದೆ ನಿರ್ವಸಿತರಿಗೆ ಅನ್ಯಾಯವನ್ನು ಮಾಡಲಾಗುತ್ತುದೆ. ಕೊಳಂಬೆ ಗ್ರಾಮದ ಸುಂಕದಕಟ್ಟೆ ಎಂಬಲ್ಲಿ ವಸತಿ ಸಮುಚ್ಚಯವು ತಲೆ ಎತ್ತಿದೆ. ಅದರ ಮುಂಭಾಗದಲ್ಲಿ ಸರಕಾರಿ ಜಾಗವಿದ್ದು, ಅದು ಪಂಚಾಯತ್ ಅಂಗಡಿ ಕಟ್ಟಡವನ್ನು ಕಟ್ಟಲೆಂದು ಕಾಯ್ದಿರಿಸಿದ ಜಾಗವಾಗಿದೆ. ಆದರೆ ಈಗಿನ ಈ ಆಡಳಿತದವರು ಬಂಡವಾಳ ಶಾಹಿಗಳ ಜೊತೆಗೂಡಿ ಆ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ವಿಷಯದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿದಾಗ ಬಿಜೆಪಿ ಬೆಂಬಲಿತ ಸದಸ್ಯರು ವಿಡಿಯೋ ಚಿತ್ರೀಕರಣ ಮಾಡಿ ಯೂಟ್ಯೂಬ್‌ಗೆ ಹಾಕಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬಗ್ಗೆ ಅಪಹಾಸ್ಯವಾಗಿ ಬರೆದು ಹಾಕಿ, ಬಿಜೆಪಿಯ ದುರಾಡಳಿತವನ್ನು ಮರೆ ಮಾಚುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೊಳಂಬೆ ಗ್ರಾಮದ ಉಳ್ಳಗುಡ್ಡೆ ಪರಿಸರದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಗ್ರಾಮ ಪಂಚಾಯತ್ ಯಾವುದೇ ರೀತಿಯಲ್ಲಿ ಪರಿಹಾರ ಮಾಡಿಲ್ಲ. ಇದರಿಂದಾಗಿ ಪರಿಸರದಲ್ಲಿ ನೀರಿಗಾಗಿ ನೆರೆಕರೆಯವರು ಜಗಳ ಮಾಡುವಂತ ಪರಿಸ್ಥಿತಿ ಬಂದು ಒದಗಿದೆ. ಕಂದಾವರ ಗ್ರಾ.ಪಂ. ದುರಾಡಳಿತದ ಆಗರವಾಗಿದ್ದು, ಈ ಬಗ್ಗೆ ಜಿಪಂ ಸಿಇಒ, ತಾಪಂ ಇಒಗೂ ದೂರು ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಪಂ ಮಾಜಿ ಸದಸ್ಯ ಯು.ಪಿ. ಇಬ್ರಾಹೀಂ, ಸುನಿತಾ ಅದ್ಯಪಾಡಿ, ಮಾಲತಿ ಉಪಸ್ಥಿತರಿದ್ದರು.