ಆಗಸ್ಟ್‌ 12: ಪುರಭವನದಲ್ಲಿ ʻನಮ್ಮಕುಡ್ಲ ಬೊಳ್ಳಿ ಪರ್ಬʼ

ಮಂಗಳೂರು: ʻನಮ್ಮಕುಡ್ಲ ಬೊಳ್ಳಿ ಪರ್ಬ 2025ʼ ಸಮಾರಂಭ ಇದೇ ಆಗಸ್ಟ್ 12ರ ಮಂಗಳವಾರ ಮಂಗಳೂರಿನ ಪುರಭವನದಲ್ಲಿ ಜರುಗಲಿದೆ ಎಂದು ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರ ಹೇಳಿದ್ದಾರೆ.

ಮಂಗಳೂರಿನ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ತುಳುನಾಡು, ತುಳುಭಾಷೆ, ಸಂಸ್ಕೃತಿ, ಸಂಪ್ರದಾಯ, ಇತಿಹಾಸವನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಹಾಗೂ ಈ ಬಗ್ಗೆ ಜಾಗೃತಿ ತುಳುವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 1999ರಲ್ಲಿ ಮಂಗಳೂರಿನಲ್ಲಿ ‘ನಮ್ಮಕುಡ್ಲ’ ವಾಹಿನಿ ಉದಯಗೊಂಡಿದ್ದು, ಅದೀಗ 25ನೇ ವರ್ಷಕ್ಕೆ ಹೆಜ್ಜೆ ಇಟ್ಟಿದೆ. 1999ರಲ್ಲಿ ನಮ್ಮ ಹಿರಿಯರಾದ ಬಿ.ಪಿ.ಕರ್ಕೇರ ಮತ್ತು ಲಕ್ಷ್ಮೀ ಕರ್ಕೇರರ ಆಶಯದಂತೆ, ಮಕ್ಕಳಾದ ಕರ್ಕೇರಾ ಸಹೋದರರ ನೇತೃತ್ವದಲ್ಲಿ ನಮ್ಮ ಕುಡ್ಲ ತುಳು ವಾರ್ತಾವಾಹಿನಿ ಆರಂಭಗೊಂಡು, ತುಳುನಾಡಿನ ಮೊತ್ತಮೊದಲ ತುಳು ವಾರ್ತಾ ಚಾನೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಲೀಲಾಕ್ಷ ಕರ್ಕೇರ ಹೇಳಿದರು.

ಕರಾವಳಿಯ ನಿತ್ಯದ ವಿದ್ಯಾಮಾನಗಳನ್ನು ತುಳು ವಾರ್ತೆಯ ಮೂಲಕ ನಿತ್ಯವೂ ಸಿಸಿ ಇಂಡಿಯಾ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಯಿತು. ಅದರೊಂದಿಗೆ ವಾರದಿಂದ ವಾರಕ್ಕೆ ಐತಾರೊರ್ಡ್ದ್ ಐತಾರ, ಕರಿನ ಬರಿನ ಸುದ್ದಿಲು ಎಂಬ ವಿಶೇಷ ಸಂಚಿಕೆಯನ್ನು ಸುಮಾರು 3 ಗಂಟೆಗಳ ಅವಧಿಯಲ್ಲಿ ಪ್ರಸಾರ ಮಾಡಲಾಯಿತು. ನಮ್ಮ ಪುಟ್ಟ ಪ್ರಯತ್ನಕ್ಕೆ ನಾಡಿನ ಜನ ಹಾರೈಸಿ ನಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಮರುವರ್ಷದಿಂದಲೇ ʻನಮ್ಮ ಕುಡ್ಲ ದೀಪಾವಳಿ ಗೂಡುದೀಪʼ ಸ್ಪರ್ಧೆಯನ್ನು ಪ್ರಾರಂಭಿಸಿದ್ದು, ಅದೀಗ ವರ್ಷಂಪ್ರತಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ. ಇದರೊಂದಿಗೆ ಸಾಧಕರಿಗೆ ನಮ್ಮ ತುಳುವೆರ್, ಪ್ರತಿಭಾ ಪುರಸ್ಕಾರ, ಬಾಲ ಪ್ರತಿಭೆ ಪ್ರಶಸ್ತಿಗಳನ್ನು ಮತ್ತು ಸೇವಾ ಸಂಸ್ಥೆಗಳಿಗೆ ಬಿಪಿ ಶರ್ಕೇರಾ ಸೇವಾ ಪ್ರಶಸ್ತಿ, ಮಹಿಳಾ ಸಾಧಕರಿಗೆ ಲಕ್ಷ್ಮೀ ಕರ್ಕೇರಾ ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದ್ದೇವೆ ಎಂದರು

ವಾರ್ತಾ ವಾಹಿನಿಯೊಂದಿಗೆ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡುತ್ತಾ ಬಂದೆವು. ವಿಶ್ವ ಬಂಟರ ಸಮ್ಮೇಳನ, ವಿಶ್ವ ತುಳು ಸಮ್ಮೇಳನ, ವಿಶ್ವ ತುಳುವೆರ ಪರ್ಬ, ಮಂಗಳೂರು ದಸರಾ, ಮಂಗಳೂರು ಶಾರದೋತ್ಸವ, ಮಂಗಳಾದೇವಿ ನವರಾತ್ರಿ ರಥೋತ್ಸವ, ಬಾಹುಬಲಿ ಮಹಾಮಸ್ತಕಾಭಿಷೇಕ, ಧರ್ಮಸ್ಥಳದ ಮಹಾನಡಾವಳಿ, ಆಳ್ವಾಸ್ ವಿಶ್ವ ವಿರಾಸತ್, ಆಳ್ವಾಸ್ ನುಡಿಸಿರಿ ಇವೆಲ್ಲವನ್ನೂ ನೇರಪ್ರಸಾರ ಮಾಡಿದೆವು. ಕೊರೊನಾ ಸಂದರ್ಭದಲ್ಲಿಯೂ ಮುನ್ನೆಚ್ಚರಿಕಾ ಕ್ರಮವಾಗಿ ನಮ್ಮ ಕುಡ್ಲ ಸ್ಟುಡಿಯೋದಲ್ಲಿಯೇ ಚೌತಿ, ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭ ಹಲವು ದಿನಗಳ ಕಾಲ ಚಿತ್ರೀಕರಣ ನಡೆಸಿ, ಸುಮಾರು ಸಾವಿರಕ್ಕೂ ಮಿಕ್ಕಿ ಕಲಾವಿದರನ್ನು ಸೇರಿಸಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಕರಿಗೆ ಉಣಬಡಿಸಿದ ಸಂತೃಪ್ತಿ ನಮಗಿದೆ ಎಂದು ಲೀಲಾಕ್ಷ ಕರ್ಕೇರ ಹೇಳಿದರು

ಅಲ್ಲದೆ ‘ನಮ್ಮ ಕುಡ್ಲ Live’, ‘ನಮ್ಮಕುಡ್ಡ 24*7’ ಎಂಬ 24 ಗಂಟೆಗಳ ನಿರಂತರ ಸುದ್ದಿ ಚಾನೆಲ್ ಪ್ರಾರಂಭಿಸಲಾಯಿತು. ಕನ್ನಡ ಹಾಗೂ ತುಳು ವಾರ್ತೆಗಳು, ರಾಜಕೀಯ ವಿಶ್ಲೇಷಣೆ, ಲೈವ್ ಡಿಬೇಟ್, ನಮ್ಮ ಆರೋಗ್ಯ, ತುಳು ತುಲಿಪು, ಸಿನಿ ಅಡ್ಡ, ಕೃಷಿ ಖುಷಿ, ವೋಕಲ್ ಫಾರ್ ಲೋಕಲ್, ಬ್ಯುಸಿನೆಸ್ ಲೈನ್, ಜನಮನ, ಬದುಕಿನ ಹೊಂಗಿರಣ, ಬ್ಯುಸಿನೆಸ್ ಟಾನಿಕ್, ನೇರಮಾತು, ಧರ್ಮನಂಬಿಕೆ, ಭೂತಾರಾಧನೆ, ಸುಸಮಯ, ರಂಗವಿಹಾರ, ವಿದೂಷಕ, ಕಿರಿಕ್ ಕಿಡ್ಸ್ ರಿಯಾಲಿಟಿ ಶೋ, ಮೈ ಆಟೋಗ್ರಾಫ್, ಡಾನ್ಸ್ ಕುಡ್ಲ ಡಾನ್ಸ್, ನಮ್ಮಕುಡ್ಲ ಹೀರೋಸ್, ನೃತ್ಯಭಜನೆ ಸ್ಪರ್ಧೆ, ಕಾಪಿಕಾಡ್ರೆನ ಕಾಮಿಡಿ, ಬಿತ್ತಿಲ್ ಬೋಳಾರ್, ಯಕ್ಷತೆಲಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ. ನಮ್ಮ ಚಾನೆಲ್‌ಗೆ 25 ವರ್ಷಗಳು ತುಂಬಿದ ಖುಷಿಯಲ್ಲಿ ನಮ್ಮೆಲ್ಲಾ ಪ್ರಾಯೋಜಕರು, ವೀಕ್ಷಕರು, ಅಭಿಮಾನಿಗಳು, ನೌಕರ ವೃಂದದವರು ಮತ್ತು ಅವರ ಮನೆಯವರನ್ನೆಲ್ಲಾ ಒಟ್ಟುಗೂಡಿ ʻನಮ್ಮಕುಡ್ಲ ಬೊಳ್ಳಿ ಪರ್ಬ 2025″ ಅನ್ನು ಆಗಸ್ಟ್ 12 ಪುರಭವನದಲ್ಲಿ ಆಯೋಜಿಸಿದ್ದೇವೆ ಎಲ್ಲರೂ ಪಾಲ್ಗೊಳ್ಳುವಂತೆ ಲೀಲಾಕ್ಷ ಕರ್ಕೇರ ವಿನಂತಿಸಿದರು.

ಕಾರ್ಯಕ್ರಮಗಳು
ಅಂದು ಬೆಳಿಗ್ಗೆ 8ರಿಂದ ತುಳುನಾಡ ಗಾನಗಂಧರ್ವ ಜಗದೀಶ್ ಪುತ್ತೂರು ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮದೊಂದಿಗೆ ಆರಂಭಗೊಂಡು, 9 ಗಂಟೆಗೆ ಶರವು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ಷೇಸರರು ಶರವು ಶ್ರೀ ರಾಘವೇಂದ್ರ ಶಾಸ್ತ್ರಿಗಳು ಕಾರ್ಯಕ್ರಮ ಉದ್ಘಾಟಿಸಲಿರುವರು. ಶ್ರೀಧಾಮ ಮಾಣಿಲ, ಗುರುಪುರ ವಜ್ರದೇಹಿ ಮಠದ ಸ್ವಾಮೀಜಿ, ಕಟೀಲು ಕ್ಷೇತ್ರದ ಆಸ್ರಣ್ಣ ಆಶೀರ್ವದಿಸಲಿರುವರು. ವಿವಿಧ ವಲಯದ ಗಣ್ಯರು ಉಪಸ್ಥಿತರಿರುವರು.
ಮಧ್ಯಾಹ್ನ 12ರಿಂದ ನಡೆಯುವ ಬೊಳ್ಳಿ ತಮ್ಮನ ಸಮಾರಂಭದಲ್ಲಿ ಒಡಿಯೂರು ಶ್ರೀ ಆಶೀರ್ವಚನ ನೀಡಲಿರುವರು. ಸಂಜೆ 5 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿರುವರು. ಕೇಂದ್ರದ ಮಾಜಿ ಸಚಿವರು ಜನಾರ್ದನ ಪೂಜಾರಿ, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ್ಹಾ ಉಪಸ್ಥಿತಲಿರುವರು. ತುಳು ಕನ್ನಡ ಸಿನಿ ಕಲಾವಿದರು ತಾರಾಮೆರುಗು ನೀಡುವರು. ರಾತ್ರಿ 7ರಿಂದ ನಮ್ಮಕಂಬಳ ಪ್ರಶಸ್ತಿ ಪ್ರದಾನ 2024-25 ನಡೆಯಲಿರುವುದು. ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ “ನಮ್ಮಕುಡ್ಲ ಬೊಳ್ಳಿ ಪರ್ಬ 2025″ ಸಂಪನ್ನಗೊಳ್ಳಲಿದೆ ಎಂದು ಲೀಲಾಕ್ಷ ಕರ್ಕೇರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರಾದ ಸುರೇಶ್ ಬಿ ಕರ್ಕೇರ,ಮೋಹನ್ ಬಿ ಕರ್ಶೇರ, ಸಂತೋಷ್ ಬಿ ಕರ್ಕೇರ, ಕದ್ರಿ ನವನೀತ ಶೆಟ್ಟಿ,ಶ್ರೀಕಾಂತ್ ರಾವ್, ಸುದರ್ಶನ್ ಕೊಟ್ಯಾನ್ ರವರು ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!