ಮಂಗಳೂರು: ಮಲ್ಪೆ ಬೀಚ್‍ಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಹಾಗೂ ತಣ್ಣೀರುಬಾವಿ ಬೀಚ್ ತುಳುನಾಡಿನ ದೊಡ್ಡ ಬೀಚ್ ಆಗಿದೆ. ಈ ಬೀಚಿಗೆ ನಿತ್ಯ ದೇಶ ವಿದೇಶಗಳಿಂದ ಸಾವಿರಾರು ಮಂದಿ ಬರುತ್ತಾರೆ. ಇದನ್ನು ಚೆನ್ನಾಗಿ ಅಭಿವೃದ್ಧಿ ಮಾಡಿದ್ದರೆ ಮಾಲ್ಡಿವ್ಸ್, ಲಕ್ಷದ್ವೀಪಗಳ ದ್ವೀಪಗಳನ್ನು ಮೀರಿಸುತ್ತಿತ್ತು. ಆದರೆ ಇದು ಅಭಿವೃದ್ಧಿ ಕಾಣದ ಕಾರಣ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ. ತಣ್ಣೀರುಬಾವಿ ಬೀಚಿಗೆ ಸಂಬಂಧಪಟ್ಟ ಜಾಗವನ್ನು ಖಾಸಗಿ ವ್ಯಕ್ತಿಗಳು ಪರಭಾರೆ ಮಾಡಿಸಿಕೊಂಡಿರುವುವುದೇ ಇದಕ್ಕೆ ಕಾರಣ.
ತಣ್ಣೀರುಬಾವಿ ಅಭಿವೃದ್ಧಿ ಕೈಗೆತ್ತಿಕೊಂಡರೂ ಸಿಆರ್‌ಝಡ್ ಕಾನೂನು ತಡೆಯಾಗುತ್ತದೆ. ಆದರೆ ಬೀಚ್ ಮುಂಭಾಗದ 2 ಎಕರೆ ಬಹುಮುಖ್ಯ ಜಾಗವೊಂದು ಕೆಐಎಡಿಬಿ ಅಧೀನದಲ್ಲಿದೆ. ಆದರೆ ಅದೀಗ ಪರಬಾರೆಯಾಗಿ ಖಾಸಗೀ ಸಹಭಾಗಿತ್ವದಲ್ಲಿ ಗೋದಾಮೊಂದು ತಲೆ ಎತ್ತಲಿದೆ ಎಂಬ ಮಾಹಿತಿ ಬಯಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಬೀಚ್ ಎದುರು ಇದ್ದ ಜಾಗದ ಗಡಿ ಗುರುತು ಮಾಡಲಾಗಿತ್ತು. ಆದರೆ ಹಲವು ಅಡೆತಡೆಯ ಬಳಿಕ ಇದೀಗ ಪ್ರವಾಸೋದ್ಯಮ ಇಲಾಖೆಯ ಆಕ್ಷೇಪದ ನಡುವೆಯೇ ಪರಭಾರೆಯಾಗಿದೆ. ಸಮುದ್ರ ಮಟ್ಟದಲ್ಲಿರುವ ಜಾಗದಲ್ಲಿ ಇದೀಗ ಭಾರೀ ಪ್ರಮಾಣದಲ್ಲಿ ಕಲ್ಲು, ಮಣ್ಣು ಸುರಿದು ಎತ್ತರ ಮಾಡಲಾಗುತ್ತಿದೆ. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಕಟ್ಟಡ ತಲೆ ಎತ್ತಲಿದೆ ಎಂದು ತಿಳಿದು ಬಂದಿದೆ.
ಬೀಚ್ ಉತ್ಸವ ಸಂದರ್ಭ ಈ ಜಾಗ ಮನರಂಜನಾ ಸೌಕರ್ಯಗಳಿಗೆ ಬಳಸಲಾಗುತ್ತಿತ್ತು. ಪಾರ್ಕಿಂಗ್‍ಗೂ ಸಹಕಾರಿಯಾಗುತ್ತಿತ್ತು. ಆದರೆ ಇದೀಗ ವಾರಾಂತ್ಯದಲ್ಲಿ ವಾಹನ ನಿಲುಗಡೆಗೂ ಪರದಾಡ ಬೇಕಾದ ಸನ್ನಿವೇಶ ಎದುರಾಗಿದೆ. ಈ ಜಾಗ ಕೆಐಎಡಿಬಿಯಿಂದ ಪ್ರವಾಸೋಧ್ಯಮ ಇಲಾಖೆಗಾದರೂ ಸಿಕ್ಕಿದ್ದರೆ ಬೀಚ್ ಅಭಿವೃದ್ಧಿ ಜೊತೆಗೆ ಪಾರ್ಕಿಂಗಿಗೂ ಅವಕಾಶ ಸಿಗುತ್ತಿತ್ತು.
ಇನ್ನು ಮುಂದೆ ಬೀಚ್ ಉತ್ಸವ ಮಾಡಿದರೆ ಜಿಲ್ಲಾಡಳಿತ ಟ್ರಾಫಿಕ್ ವ್ಯವಸ್ಥೆಗೆ ಬೇರೆಯೇ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲಿನ ಬೀಚ್‌ಗಳಿಗೆ ಸಾವಿರಾರು ಮಂದಿ ತಮ್ಮ ಐಷಾರಾಮಿ ಕಾರುಗಳಲ್ಲಿ ಬರುತ್ತಾರೆ. ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಜಾಸ್ತಿ ಇರುತ್ತದೆ. ಇದೀಗ ಬಹುಮುಖ್ಯ ಜಾಗವೊಂದು ಪರಬಾರೆಯಾದ ಕಾರಣ ಪಾರ್ಕಿಂಗ್ ಸಮಸ್ಯೆ ಎದುರಾಗಲಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿ ಜಿಲ್ಲೆಯ ಅಭಿವೃದ್ಧಿಗೆ ಸಮಸ್ಯೆಯಾಗಲಿದೆ.
ಅಲ್ಲದೆ ಬೀಚ್ ನಿರ್ವಹಿಸಲು ಗುತ್ತಿಗೆ ಪಡೆಯುವವರೂ ಹಿಂದೇಟು ಹಾಕಬಹುದು. ಉದ್ಯಮಿಗಳು ಹೂಡಿಕೆ ಹೂಡಲು ಹಿಂದೇಟು ಹಾಕಬಹುದು. ಹಾಗಾಗಿ ಈಗ ಖಾಸಗಿಯವರಿಗೆ ಪರಭಾರೆಯಾಗಿರುವ ಜಾಗವನ್ನು ಬೀಚ್ ಅಭಿವೃದ್ಧಿಗೆ ಬಳಸಬೇಕೆನ್ನುವ ಒತ್ತಾಯ ಕೇಳಿಬಂದಿದೆ. ಇಲ್ಲವಾದರೆ ತಣ್ಣೀರು ಬಾವಿ ಬೀಚ್ ಪ್ರವಾಸಿಗರಿಂದ ದೂರವಾಗುವ ಭೀತಿ ಇದೆ.