ಮಂಗಳೂರು: ವಿದ್ಯುತ್ ಸರಬರಾಜು ನಿಗಮಗಳ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲು, ಗ್ರಾಹಕರಿಂದಲೇ ಹಣ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು, ಮುಚ್ಚಿಕೊಳ್ಳಲು ಪ್ರಯತ್ನಿಸಿ, “ಆ ನಿರ್ಧಾರ ನಮ್ಮದಲ್ಲ, ಹಿಂದಿನ ಸರ್ಕಾರದ್ದು” ಎಂದು ಬಾಲಿಶ ಹೇಳಿಕೆ ನೀಡಿ ಜನತೆಯ ಮುಂದೆ ಇನ್ನಷ್ಟು ಬೆತ್ತಲಾಗುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರದ ಆದೇಶವಾಗಿದ್ದರೆ ಬಿಜೆಪಿ ಅವಧಿಯಲ್ಲಿ ಜಾರಿಗೊಳಿಸಿದ ಗೋಹತ್ಯಾ ನಿಷೇಧವನ್ನು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂಪಡೆದ ನೀವು ಇದನ್ನೂ ಸಹ ಹಿಂಪಡೆದು ನಿಮ್ಮ ತಾಕತ್ತು ಪ್ರದರ್ಶಿಸಿ. ನೌಕರರ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಪಿಂಚಣಿ ಹಾಗೂ ಗ್ರಾಚುಟಿಯನ್ನು ಖಂಡಿತವಾಗಿಯೂ ನೀಡಬೇಕಾಗಿದ್ದು ಸರ್ಕಾರದ ಬೊಕ್ಕಸದಿಂದ ಹೊರತು ಜನರ ಜೇಬಿನಿಂದ ಅಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
₹900 ಗೆ ಸಿಗುತ್ತಿದ್ದ ಸ್ಮಾರ್ಟ್ ಮೀಟರ್ ಗೆ ₹10,000 ಯಾಕೆ? ಎಂದು ಹೈಕೋರ್ಟ್ ಸಹ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹೆಚ್ಚುವರಿ ಭದ್ರತಾ ಠೇವಣಿ ಹೆಸರಿನಲ್ಲಿ ಉಚಿತ ವಿದ್ಯುತ್ ಪಡೆಯುತ್ತಿರುವವರಿಂದಲೂ ಸಾವಿರಾರು ರೂಪಾಯಿ ಲೂಟಿ ಮಾಡಲಾಗುತ್ತಿದೆ. ಸರ್ಕಾರ ಒಂದು ಕೈಯಲ್ಲಿ ಸವಲತ್ತು ಕೊಟ್ಟ ಹಾಗೆ ಮಾಡಿ ಇನ್ನೊಂದು ಕೈಯಿಂದ ಕಿತ್ತುಕೊಂಡರೆ ಏನು ಪ್ರಯೋಜನ? ಲೋಡ್ ಶೆಡ್ಡಿಂಗ್ ನಿಂದಾಗಿ ಸಾರ್ವಜನಿಕರು, ರೈತರು, ಕೈಗಾರಿಕೆಗಳು, ವಿದ್ಯಾರ್ಥಿಗಳು, ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.
ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಾಗಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನೂ ಸಹ ಸ್ಪಂದಿಸುತ್ತಿಲ್ಲ. ದ.ಕ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ನೇತೃತ್ವದಲ್ಲಿ ಹೋರಾಟ ನಡೆದು ಕೊನೆಗೆ ಜಿಲ್ಲಾ ಬಿಜೆಪಿ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಈ ಗೊಂದಲವನ್ನು ಬಗೆಹರಿಸದೇ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯನ್ನು ಸಂಪೂರ್ಣ ಕಡೆಗಣಿಸಿರುವುದು ಖಂಡನೀಯವಾಗಿದ್ದು ಕೆಲಸವೇ ಇಲ್ಲದೇ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿಯಲ್ಲಿರುವ ಕಾರ್ಮಿಕರ ಪರಿಸ್ಥಿತಿ ನೋಡಿಯಾದರೂ ಕೂಡಲೇ ಜನರಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಪ್ರಮುಖರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಸಂಜಯ್ ಪ್ರಭು, ಮುರುಳಿ ಹೊಸಮಜಲು, ಗಂಗಾಧರ್ ಸಾಲ್ಯಾನ್ ಉಪಸ್ಥಿತರಿದ್ದರು.
ಬಿಜಪಿ ಸರ್ಕಾರವಿದ್ದಾಗಿನ ವಿದ್ಯುತ್ ಬಿಲ್ ಪ್ರದರ್ಶಿಸಿದ ಕಾಮತ್
ಬಿಜೆಪಿ ಅವಧಿಯ ಕರೆಂಟ್ ಬಿಲ್ಲುಗಳಲ್ಲಿ ಪಿಂಚಣಿ ಹಾಗೂ ಗ್ರ್ಯಾಚುಟಿ ಹೆಸರಿನಲ್ಲಿ ಒಂದೇ ಒಂದು ರೂಪಾಯಿ ಸಹ ಸಂಗ್ರಹ ಮಾಡಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಜನರನ್ನು ಲೂಟಿ ಮಾಡುತ್ತಿದ್ದು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಕರೆಂಟ್ ಬಿಲ್ಲುಗಳಲ್ಲಿ ಪರೀಕ್ಷಿಸಿಕೊಳ್ಳಬಹುದು. ಸಂಶಯವಿದ್ದರೆ ಕಾಂಗ್ರೆಸ್ ನಾಯಕರೂ ಸಹ ತಮ್ಮ ಮನೆಯ ಬಿಲ್ ಪರೀಕ್ಷಿಸಿಕೊಂಡು ಜನತೆಯ ದಿಕ್ಕು ತಪ್ಪಿಸುವ ಹೇಳಿಕೆ ನೀಡಿದ್ದಕ್ಕೆ ಬಹಿರಂಗ ಕ್ಷಮೆಯಾಚಿಸಲಿ ಎಂದರು. ಇದಕ್ಕೆ ಪೂರಕ ಎಂಬಂತೆ ಬಿಜೆಪಿ ಕಾಲದಲ್ಲಿ ಬರುತ್ತಿದ್ದ ವಿದ್ಯುತ್ ಬಿಲ್ ತೋರಿಸಿ ನಮ್ಮ ಸರ್ಕಾರವಿದ್ದಾಗ ಪಿಂಚಣಿ, ಗ್ರಾಚ್ಯುಟಿಗೆ ಬಡ ಗ್ರಾಹಕರ ಮೇಲೆ ಶುಲ್ಕ ವಿಧಿಸುತ್ತಿರಲಿಲ್ಲ. ಈ ದಾಖಲೆಯನ್ನು ಅವರಿಗೆ ಸುಳ್ಳು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.