ನೈಜ ಆರೋಪಿಗಳ ಬಂಧನವಾಗದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು: ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್, ಪತ್ರಕರ್ತರ ಮೇಲಿನ ಹಲ್ಲೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ನಡೆದ ದಾಳಿಯಾಗಿದೆ ಎಂದು ಎಸ್ಡಿಪಿಐ ಆರೋಪಿಸಿದ್ದು, ಘಟನೆಯ ಹಿಂದಿರುವ ನೈಜ ಆರೋಪಿಗಳು, ಸೂತ್ರದಾರರನ್ನು ಬಂಧಿಸದಿದ್ದರೆ ನಗರದೆಲ್ಲೆಡೆ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಎಸ್ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೆ, ಯೂಟೂಬರ್ಸ್ ಮತ್ತು ಪತ್ರಕರ್ತರ ಮೇಲೆ ಧರ್ಮಸ್ಥಳದಲ್ಲಿ ನಡೆದ ದಾಳಿಯು ಪೈಶಾಚಿಕತೆಯಿಂದ ಕೂಡಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನವೆಂದು ಆರೋಪಿಸಿದ್ದಾರೆ.
ಸದ್ಯ ಈ ಪ್ರಕರಣವು ಗಂಭೀರವಾಗಿದ್ದು, ಧರ್ಮಸ್ಥಳ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ SIT ತನಿಖೆಯಿಂದ ಹತಾಶರಾದ ಡಿ ಗ್ಯಾಂಗ್ ನಡೆಸುತ್ತಿರುವ ಭಯೋತ್ಪಾದನಾ ಕೃತ್ಯವೆಂದು ಅಬ್ದುಲ್ ಜಲೀಲ್ ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರು ಸಮಾಜದ ಪ್ರತಿಬಿಂಬವಾಗಿದ್ದು, ಸತ್ಯವನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಸಮಾಜಘಾತುಕ ಶಕ್ತಿಗಳು ಆ ಪತ್ರಕರ್ತರ ಮೇಲೆಯೇ ದಾಳಿ ನಡೆಸುವ ಮೂಲಕ ಪ್ರಜಾಪ್ರಭುತ್ವದ ಮೂಲ ತತ್ವವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಎಸಗಿದೆ. ದ. ಕ ಜಿಲ್ಲೆಯ ಪವಿತ್ರ ಮಂಜುನಾಥ ದೇವಾಲಯದಂತಹ ಪುಣ್ಯ ಕ್ಷೇತ್ರ ಇರುವ ಧರ್ಮಸ್ಥಳ ದಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ಖೇದಕರ ಮತ್ತು ಆತಂಕಕಾರಿಯಾಗಿದೆ. ಈ ಘಟನೆಯು ಸಮಾಜದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ದುರುದ್ದೇಶವನ್ನು ಹೊಂದಿದೆ ಹಾಗೂ ಗಲಭೆ ಸೃಷ್ಟಿಸಿ ತನಿಖೆಯ ಹಾದಿ ತಪ್ಪಿಸುವ ಷಡ್ಯಂತ್ರವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸದ್ಯ ಘಟನೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಿಗೂ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕು. ಪೋಲಿಸರು ಆರೋಪಿಗಳನ್ನು ತಕ್ಷಣ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು. ಅಲ್ಲದೇ ಘಟನೆಯ ಹಿಂದಿರುವ ಸೂತ್ರದಾರರನ್ನೂ ಬಂಧಿಸಬೇಕು. ಒಂದು ವೇಳೆ ಬಂಧಿಸದಿದ್ದಲ್ಲಿ ಮಂಗಳೂರು ನಗರದೆಲ್ಲೆಡೆ ಪ್ರತಿಭಟನೆ ನಡೆಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ.