ಬಂಟ್ವಾಳ: ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ ( 21) ಕಂಕನಾಡಿ ಪೋಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಮುಗೇರು ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಜುಲೈ 27ರಂದು ಹೇಮಂತ್ ನಾಪತ್ತೆಯಾಗಿದ್ದ, ಮರುದಿನ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 29 ರ ಮಂಗಳವಾರ ಮಧ್ಯಾಹ್ನ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಡ್ಯಾಂ ಬಳಿ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಪತ್ತೆಯಾಗಿತ್ತು.
ಇದರ ಆಧಾರದಲ್ಲಿ ಅಂದು ಮುಳುಗುತಜ್ಞರ ತಂಡ, ಅಗ್ನಿ ಶಾಮಕ ದಳದವರು ಹಾಗೂ ಬಂಟ್ವಾಳ ಗ್ರಾಮಾಂತರ ಮತ್ತು ನಗರ ಠಾಣಾ ಪೋಲೀಸರ ತಂಡ ಸಾಕಷ್ಟು ಹುಡುಕಾಡಿದರೂ ಯಾಮವುದೇ ಸುಳಿವು ಲಭ್ಯವಾಗಿರಲಿಲ್ಲ. ಜು.30ರಂದು ಜಕ್ರಿಬೆಟ್ಟು ಡ್ಯಾಂ ನಿಂದ ತುಂಬೆ ಡ್ಯಾಂವರೆಗೂ ಶೋಧ ನಡೆಸಿದೆಯಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ನಿನ್ನೆ ಈಶ್ವರ್ ಮಲ್ಪೆ ಅವರ ತಂಡ, ಎನ್.ಡಿ.ಆರ್.ಎಫ್ ತಂಡ, ಅಗ್ನಿಶಾಮಕ ದಳ ಹಾಗೂ ಈಜುಗಾರ ನಿಸಾರ್ ತಂಡ ಸಾಕಷ್ಟು ಹುಡುಕಾಡಿತ್ತು. ಅಲ್ಲದೆ ಡ್ರೋನ್ ಬಳಸಿಯೂ ಶೋಧ ನಡೆಸಲಾಗಿತ್ತು.ಆದರೆ ನಿನ್ನೆ ಸಂಜೆ ಡ್ರೋನ್ ಕ್ಯಾಮರಾದಲ್ಲಿ ನೇತ್ರಾವತಿ ನದಿಯ ಹಾದು ಹೋದ ಬಜಾಲ್ ಮುಗೇರು ಬಳಿ ಶವ ತೇಲಾಡುತ್ತಿದ್ದು, ಕಾರ್ಯಾಚರಣೆಯ ತಂಡ ಮೇಲೆತ್ತಿತು.