ಮಂಗಳೂರು: ದಕ್ಷಿಣ ಕನ್ನಡ ಜಾನಪದ ಯುವ ಬ್ರಿಗೇಡ್ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಸಂಚಾಲಕರ ಪದ ಪ್ರಧಾನ ಕಾರ್ಯಕ್ರಮವು ಆಗಸ್ಟ್ 7ರ ಗುರುವಾರ ಸುರತ್ಕಲ್‌ನ ಗೋವಿಂದದಾಸ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಸಂಯೋಗದೊಂದಿಗೆ ಪದವಿ ಕಾಲೇಜಿನ ಎ.ವಿ. ಹಾಲ್‌ನಲ್ಲಿ ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಯುವ ಬ್ರಿಗೇಡ್ ಘಟಕದ ಸಂಚಾಲಕ ಸಂಪತ್ ಎಸ್. ಬಿ. ಹೇಳಿದರು.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಕಾರ್ಯಕ್ರಮವನ್ನು ಜಾನಪದ ಯುವ ಬ್ರಿಗೇಡ್ ಘಟಕದ ರಾಜ್ಯಾಧ್ಯಕ್ಷರಾದ ಡಾ। ಎಸ್. ಬಾಲಾಜಿಯವರ ಮಾರ್ಗದರ್ಶನದಂತೆ ತಾಲೂಕು ಸಂಚಾಲಕರೆಲ್ಲಾ ಭಾಗವಹಿಸಲಿದ್ದಾರೆ. ಇವರು ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ ರಾಜ್ಯಾದಂತ ಹಲವಾರು ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಿದ್ದಾರೆ. ಅಲ್ಲದೆ ಅಲ್ಲಿಯ ಯುವ ಸಮೂಹಗಳನ್ನು ಒಗ್ಗೂಡಿಸಿಕೊಂಡು ಅಳಿಸಿ ಹೋದಂತಹ ಕೆಲವೊಂದು ಜಾನಪದ ಕಲೆಗಳನ್ನು ಮರು ಪರಿಚಯಿಸುವುದರ ಮೂಲಕ ಮತ್ತು ಎಲೆ ಮರೆಯ ಕೆಲವೊಂದು ಜನಪದ ಸಂಗೀತ ಹಾಗೂ ಜಾನಪದ ನೃತ್ಯ ತಂಡಗಳನ್ನು ಗುರುತಿಸಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದರ ಮೂಲಕ ಜಾನಪದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.
2022ರಲ್ಲಿ ತರಿಕೆರೆಯಲ್ಲಿ ಹಾಗೂ ಇತ್ತೀಚೆಗೆ ಜೂನ್ 25, 2025ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ದಶಮಾನೋತ್ಸವದ ಆಚರಣೆಯ ಸಲುವಾಗಿ ಪ್ರಪ್ರಥಮ ಬಾರಿಗೆ ಜಾನಪದ ಪರಿಷತ್ ಸಮ್ಮೇಳನವನ್ನು ನಡೆಸಲಾಗಿತ್ತು. ಈ ಸಮ್ಮೇಳನದಲ್ಲಿ ಅನೇಕ ಗಣ್ಯ ವ್ಯಕ್ತಿಗಳಿಗೆ, ಗುರು ಹಿರಿಯರಿಗೆ ಹಾಗೂ ನೂರಾರು ಯುವಕ-ಯುವತಿಯರಿಗೆ ಕಲಾ ಕ್ಷೇತ್ರ, ಸಮಾಜ ಸೇವೆ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಹಾಗೂ ಸಾಧನೆಗೈಯ್ಯುತ್ತಿರುವವರನ್ನು ಗಮನಿಸಿ ಅವರಿಗೆ ರಾಜ್ಯ ಪ್ರಶಸ್ತಿ, ಜಾನಪದ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ ಹಾಗೂ ರಾಜ್ಯ ಯುವ ಸಿರಿ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಸಮ್ಮೇಳನಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಜನಾಭಿನಂದನೆಗಳಿಗೆ ಪಾತ್ರರಾಗಿದ್ದಾರೆ. ಮುಂದೆ ಪುತ್ತೂರು, ಧಾರವಾಡ, ಗೋವಾ ಹಾಗೂ ದೆಹಲಿಯಲ್ಲಿ ಅನೇಕ ಜಾನಪದ ಯುವ ಸಮೂಹ ಒಕ್ಕೂಟ ಕಾರ್ಯಕ್ರಮಗಳನ್ನು ಹಾಗೂ ಜಾನಪದ ಪರಿಷತ್ ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಜಾನಪದ ಯುವ ಬ್ರಿಗೇಡ್ ಎಂಬುವುದು ಯುವ ಸಮೂಹಗಳಿಗೆ ಮೀಸಲಾದ ಸಂಸ್ಥೆ. ಇದರ ಸದುಪಯೋಗವನ್ನು ಎಲ್ಲಾ ಯುವ ಸಮೂಹಗಳು ಪಡೆದುಕೊಳ್ಳಬೇಕು ಎಂದು ಸಂಪತ್ ಬಿಎಸ್ ವಿನಂತಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ। ಎಸ್. ಬಾಲಾಜಿ ಉದ್ಘಾಟಿಸಲಿರುವರು. ಅಧ್ಯಕ್ಷರಾಗಿ ಹರೀಶ್ ಆಚಾರ್ಯ (ಪ್ರಾಂಶುಪಾಲರು, ಗೋವಿಂದದಾಸ ಪದವಿ ಕಾಲೇಜು, ಸುರತ್ಕಲ್), ಮುಖ್ಯ ಅತಿಥಿಗಳಾಗಿ ಎಚ್. ಜಯಚಂದ್ರ ಹತ್ವಾರ್ (ಅಧ್ಯಕ್ಷರು, ಹಿಂದು ವಿದ್ಯಾದಾಯಿನೀ ಸಂಘ, ಸುರತ್ಕಲ್), ರಮೇಶ್ ಭಟ್ (ನಿರ್ದೇಶಕರು, ಗೋವಿಂದದಾಸ ಕಾಲೇಜು, ಸುರತ್ಕಲ್, ʻಕಲಾ ಗುರಿಕಾರೆ’ ಬಿರುದಾಂಕಿತರು), ಲಕ್ಷ್ಮೀ ಪಿ. (ಪ್ರಾಂಶುಪಾಲರು, ಗೋವಿಂದದಾಸ ಪದವಿ ಪೂರ್ವ ಕಾಲೇಜು, ಸುರತ್ಕಲ್) ಭಾಗವಹಿಸಲಿರುವರು.
ಕಾರ್ಯಕ್ರಮದಲ್ಲಿ ಜಾನಪದ ಯುವ ಬ್ರಿಗೇಡ್ ಸೌರವ್ ಶ್ರೀಯಾನ್, ಸುರತ್ಕಲ್, ಕಾರ್ತಿಕ್ ರಾವ್ ಇಡ್ಯಾ, ಕೌಶಲ್ ರಾವ್, ಪುತ್ತಿಗೆ, ಸತ್ಯಜಿತ್ ಎಚ್. ರಾವ್, ಬಂಟ್ವಾಳ, ಶ್ರೇಯಾ ರೋಹಿತ್ ಉಚ್ಚಿಲ, ಹರ್ಷಲ್ ಉಜಿರೆ ಉಪಸ್ಥಿತರಿರುವರು ಎಂದರು.
ಮುಂದಿನ ದಿನಗಳಲ್ಲಿ ಪ್ರಶಸ್ತಿ ಪ್ರಧಾನಗಳು, ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮಗಳು, ಜಾನಪದ ಕಲೆಗಳ ಬಗ್ಗೆ ಜಾಗೃತ ಮೂಡಿಸುವ ಕಾರ್ಯಕ್ರಮಗಳು ಇತ್ಯಾದಿ ನಡೆಯಲಿದೆ ಎಂದು ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಸಂಪತ್ ಎಸ್. ಬಿ. ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ದ. ಕ ಜಾನಪದ ಯುವ ಬ್ರಿಗೇಡ್ ಲಕ್ಷ್ಮೀನಾರಾಯಣ ರಾವ್, ಯಕ್ಷಗಾನ ಭಾಗವತರು, ಕಲಾವಿದೆ ಶ್ರೇಯ ರೋಹಿತ್ ಉಪಸ್ಥಿತರಿದ್ದರು.