ಮಂಗಳೂರು: ಕುಂದಗನ್ನಡದ ನೆಲದಲ್ಲಿ ಜನಿಸಿ, ವೃತ್ತಿ ನಿಮಿತ್ತ ಮಂಗಳೂರಿಗೆ ಬಂದು ನೆಲೆಸಿ, ತುಳುನಾಡಿನವರೇ ಆಗಿದ್ದುಕೊಂಡರೂ, ತಮ್ಮ ಮೂಲ ನೆಲೆಯ ಭಾಷೆ, ಸಂಸ್ಕೃತಿ ಆಚರಣೆ, ಸಂಪ್ರದಾಯವನ್ನ ಉಳಿಸಿಕೊಂಡು ತಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ʻಕುಡ್ಡದಗಿಪ್ಪ ಕುಂದಾಪ್ರದರ್ʼ ವಾಟ್ಸಪ್ ಬಳಗದವರ ಆಶ್ರಯದಲ್ಲಿ ʻವಿಶ್ವ ಕುಂದಾಪ್ರ ದಿನಾಚರಣೆʼಯನ್ನು ಆಷಾಢ ಮಾಸದ ಒಂದು ದಿನದಲ್ಲಿ ‘ಕುಂದಾಪ್ರ ಹಬ್ಬ’ ಹೆಸರಿನಲ್ಲಿ ಹಲವು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕುಂದಾಪ್ರ ಕನ್ನಡ ಹಬ್ಬ ಇದೇ ಅಗಸ್ಟ್ 3ರ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 7ರ ಉರ್ವಸ್ಟೋರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ತಿಳಿಸಿದೆ.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಿತಿ, ಈ ಕಾರ್ಯಕ್ರಮದ ಮೂಲ ಉದ್ದೇಶ ಕುಂದಾಪುರದ ಮೂಲ ಭಾಷೆಯ ಆಚಾರ ವಿಚಾರಗಳ ಮತ್ತು ಅದರ ಅಸ್ಥಿತೆಯ ಮಹತ್ವವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಹಾಗೂ ಉಳಿಸಿ ಬೆಳೆಸುವುದಾಗಿದೆ ಎಂದಿದೆ.
ಕುಂದಾಪ್ರ ಕನ್ನಡ ಹಬ್ಬದ ವಿಶೇಷತೆಗಳು: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ ಗಂಟೆಯವರೆಗೆ ಗ್ರಾಮೀಣ ಕ್ರೀಡಾಕೂಟ ನಡೆಸಲಾಗುವುದು. ಅದರಲ್ಲಿ ಮೂರು ಕಾಲಿನ ಓಟ, ಸೈಕಲ್ ಟೈಯರ್ ಓಟ, ಗೇರು ಬೀಜದ ಆಟ, ರಂಗೋಲಿ ಸ್ಪರ್ಧೆ, ಮಡಲು ನೇಯುವ ಸ್ಪರ್ಧೆ, ಗೋಣಿಚೀಲ ಓಟದ ಸ್ಪರ್ಧೆ ಮತ್ತು ಇನ್ನಿತರ ಗ್ರಾಮೀಣ ಸೊಗಡಿನ ಆಟಗಳು ನಡೆಯಲಿದೆ.
ಗೌಜಿ ಗಮ್ಮತ್ತು ಕಲಾಂಜಲಿ ತಂಡ ಬ್ರಹ್ಮವಾರ ಅವರಿಂದ ನಗೆ ಪ್ರಹಸನ ಆಸಾಡಿ ಒಡ್ರ್ ನುಡಿ ತೇರು ʻದೈವೀಲೋಕದ ದಂತಕತೆ” ಇದರಲ್ಲಿ ಕುಂದಾಪುರ ಗ್ರಾಮೀಣ ಪ್ರದೇಶದ ದೈವ ದೇವರುಗಳ ವಿಶೇಷತೆಯ ಬರಹಗಳ ಸ್ಪರ್ಧೆ ನಡೆಸಲಾಗುವುದು. ಆಸಾಡಿ ಒಡ್ರ್ ಹಬ್ಬದ ರೀಲ್ಸ್ ಸ್ಪರ್ಧೆ, ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಪ್ರತಿಭಾ ಪುರಸ್ಕಾರ, ಕುಂದಾಪುರದ ಸಾಂಪ್ರದಾಯಿಕ ತಿಂಡಿ ತಿನಿಸುಗಳು, ಯಕ್ಷಗಾನದ ಕಿರು ಪ್ರದರ್ಶನ, ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳು ಅಲ್ಲದೆ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳು ನೆರವೇರಲಿದೆ.
ಬೆಳಿಗ್ಗೆ ನಡೆಯುವ ಗ್ರಾಮೀಣ ಕ್ರೀಡಾಕೂಟವನ್ನು ಡಾ. ರವೀಶ್ ತುಂಗ, ಅಧ್ಯಕ್ಷರು ʻಮನಸ್ವಿನಿ ತುಂಗ ಫ್ಯಾಮಿಲಿ ಟ್ರಸ್ಟ್, ಇವರು ಉದ್ಘಾಟಿಸಲಿದ್ದಾರೆ. ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು 2025ರ ಆಯೋಜನಾ ಸಮಿತಿಯ ಅಧ್ಯಕ್ಷರಾದ ಮಾಲಾ ಶೆಟ್ಟಿ, ಬಾರ್ಕೂರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾಗಿ ಮತ್ತು ದಿಕ್ಕೂಚಿ ಭಾಷಣಕಾರರಾಗಿ ಡಾಕ್ಟರ್ ದೀಪಕ್ ಶೆಟ್ಟಿ ಬಾರ್ಕೂರು- ಅಧ್ಯಕ್ಷರು, ಕುಂದಾಪುರ ಕನ್ನಡ ಪ್ರತಿಷ್ಠಾನ ರಿ. ಬೆಂಗಳೂರು ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಿಶೋರ್ ಕುಮಾರ್ ಬಿ. -ಅಧ್ಯಕ್ಷರು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್, ಪ್ರೊ. ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ- ನಿವೃತ್ತ ಪ್ರಾಂಶುಪಾಲರು ರಾಮಕೃಷ್ಣ ಕಾಲೇಜು ಬಂಟ್ಸ್ ಹಾಸ್ಟೆಲ್ ಮಂಗಳೂರು, ಮತ್ತು CA. ಎಸ್.ಎಸ್. ನಾಯಕ್ ಸಾಸ್ತಾನ MSME Startup Mentor ಮಂಗಳೂರು ವಹಿಸಲಿದ್ದಾರೆ.
ಕುಂದಗನ್ನಡದ ನೆಲದ ಸಾಧಕರಾದ ಡಾ. ಅಣ್ಣಯ್ಯ ಕುಲಾಲ್ ಗೆ ಡಾಕ್ಟರ್ ಬಿ.ಸಿ.ರಾಯ್ ಸಮುದಾಯ ಸೇವಾ ರಾಷ್ಟ್ರೀಯ ಪ್ರಶಸ್ತಿ 2025ರ ಪುರಸ್ಕೃತರು ಮತ್ತು CA. ಶಾಂತರಾಮ ಶೆಟ್ಟಿ ಅಧ್ಯಕ್ಷರು ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಹಾಗೂ ಡಾ| ಅರುಣ್ ಕುಮಾರ್ ಶೆಟ್ಟಿ ಉಪನಿರ್ದೇಶಕರು (ಆಡಳಿತ) ಪಶುವೈದ್ಯ ಇಲಾಖೆ ಕರ್ನಾಟಕ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರು ಇವರಿಗೆ ಗೌರವ ಸನ್ಮಾನ ನೆರವೇರಲಿದೆ.
ಕಾರ್ಯಕ್ರಮಕ್ಕೆ ಮಂಗಳೂರಿನ ಜನತೆ ಮತ್ತು ಮಂಗಳೂರಿನಲ್ಲಿ ನೆಲೆಸಿರುವ ಕುಂದಗನ್ನಡದವರೆಲ್ಲರೂ ಭಾಗವಹಿಸುವಂತೆ ಸಮಿತಿ ವಿನಂತಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಆಯೋಜನ ಸಮಿತಿ ಅಧ್ಯಕ್ಷೆ ಮಾಲಾ ಎಸ್. ಶೆಟ್ಟಿ, ಕಾರ್ಯದರ್ಶಿ ಲಿಖಿತ ಶೆಟ್ಟಿ, ಗೌರವಾಧ್ಯಕ್ಷ ಜಿ.ಕೆ. ಶೆಟ್ಟಿ, ಕೋಶಾಧಿಕಾರಿ ಶರತ್ ಆಚಾರ್ಯ, ಸಂಚಾಲಕ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.