ಜುಲೈ 26ರಂದು ರಾಷ್ಟ್ರಭಕ್ತ ನಾಗರಿಕ ವೇದಿಕೆ ವತಿಯಿಂದ ಕಾರ್ಗಿಲ್‌ ವಿಜಯ ದಿವಸ: ಸತ್ಯಜಿತ್‌ ಸುರತ್ಕಲ್

ಸುರತ್ಕಲ್: ಪ್ರತಿ ವರ್ಷದಂತೆ ಈ ಬಾರಿಯೂ ರಾಷ್ಟ್ರಭಕ್ತ ನಾಗರಿಕ ವೇದಿಕೆ(ರಿ.) ಸುರತ್ಕಲ್‌ ವತಿಯಿಂದ ಜುಲೈ 26ರ ಶನಿವಾರ ಸುರತ್ಕಲ್‌ನಲ್ಲಿ ಕಾರ್ಗಿಲ್‌ ವಿಜಯ ದಿವಸ ಆಚರಿಸಲಿದ್ದೇವೆ ಎಂದು ವೇದಿಕೆಯ ಅಧ್ಯಕ್ಷರಾದ ಸತ್ಯಜಿತ್‌ ಸುರತ್ಕಲ್‌ ಹೇಳಿದ್ದಾರೆ.

ಸುರತ್ಕಲ್‌ನಲ್ಲಿ ಕರೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದು ಸಂಜೆ 6:30 ಗಂಟೆಗೆ ಇಡ್ಯಾ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಹಾಗೂ ಅನುವಂಶಿಕ ಆಡಳಿತ ಮೊತ್ತೇಸರ ವೇದಮೂರ್ತಿ ಐ. ರಮಾನಂದ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ʻಹಣತೆ ಮೆರವಣಿಗೆಯ” ನಡೆಯಲಿದೆ. ಈ ಮೆರವಣಿಗೆ ಸುರತ್ಕಲ್ ಪೇಟೆಯಾಗಿ ಸಾಗಿ ಕರ್ನಾಟಕ ಸೇವಾ ವೃಂದದ ಹುತಾತ್ಮ ʻಕರ್ನಾಟಕ ಸೇವಾ ವೃಂದ’ ವೇದಿಕೆಯಲ್ಲಿ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ವಾಯು ಸೇನಾಧಿಕಾರಿ ಸಾಜೆರ್ಂಟ್ ಪ್ರಕಾಶ್ ಭಟ್ ಕುಕ್ಕಿಲ ವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಎಂಆರ್‌ಪಿಎಲ್‌ ಕಾರ್ಪರೇಟ್‌ ಕಮ್ಯುನಿಕೇಷನ್‌ನ ಸಿಜಿಎಂ ರುಡಾಲ್ಫ್ ನೊರೊನ್ಹಾ, ಟ್ರಾನ್ಸ್ಪೋರ್ಟ್‌ ಕಾಂಟ್ರಾಕ್ಟರ್‌ ಮತ್ತು ಏಜೆಂಟ್ಸ್‌ ಅಸೋಸಿಯೇಷನ್‌ ಮಂಗಳೂರು ಇದರ ಪ್ರಮಿಖ ಚಿತ್ತರಂಜನ್ ಭಾಗವಹಿಸಲಿದ್ದಾರೆ ಎಂದು ಸತ್ಯಜಿತ್‌ ಹೇಳಿದರು.

ಎಂದಿನಂತೆ ಈ ಬಾರಿಯೂ ಮೂವರು ಯೋಧರಿಗೆ ಸನ್ಮಾನ, ನಿವೃತ್ತ ಹಾಗೂ ಹಾಲಿ ಸೈನಿಕರಿಗೆ ಗೌರವಾರ್ಪಣೆ, ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಅರ್ಹ ಸೈನಿಕ ಕುಟುಂಬಗಳಿಗೆ ʻಸೈನಿಕ ಕಲ್ಯಾಣ ನಿಧಿ’ ವಿತರಣೆ ನಡೆಯಲಿದೆ. ಕಳೆದ 9 ವರ್ಷದಲ್ಲಿ ಒಟ್ಟು ರೂ. 31,50,000 ಸೈನಿಕ ಕಲ್ಯಾಣ ನಿಧಿ ವಿತರಿಸಿದ್ದು ಈ ವರ್ಷ ಒಂದು ಕುಟುಂಬಕ್ಕೆ ನೀಡುವ ಕನಿಷ್ಠ ನಿಧಿಯನ್ನು ರೂ. 25,000 ದಿಂದ ರೂ.30,000ಕ್ಕೆ ಹೆಚ್ಚಿಸಲಾಗಿದೆ. ಈಗಾಗಲೇ 21 ಕುಟುಂಬಗಳನ್ನು ಗುರುತಿಸಿದ್ದು ರೂ. 6,30,000 ‘ಸೈನಿಕ ಕಲ್ಯಾಣ ನಿಧಿ” ನೀಡಲಾಗುವುದು ಎಂದು ಅವರು ಪ್ರಕಟಿಸಿದರು.

ಅಕ್ಟೋಬರ್, ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಈ ಭಾಗದ ಹೈಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಸೈನ್ಯದ ಬಗ್ಗೆ ಮಾಹಿತಿ ನೀಡಲು ಸೆಮಿನಾರ್ ನಡೆಸಲು ತೀರ್ಮಾನಿಸಲಾಗಿದೆ ಎಂದು ಸತ್ಯಜಿತ್‌ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಗೌರವಾಧ್ಯಕ್ಷ ಕಡಂಬೋಡಿ, ಪ್ರಮುಖರಾದ ಮಹಾಬಲ ಪೂಜಾರಿ, ಶ್ರೀಕಾಂತ್ ಶೆಟ್ಟಿ ಬಾಳ, ಯಶಪಾಲ್ ಸಾಲಿಯಾನ್, ಹರೀಶ್ ಬಂಗೇರ, ಗುಣವತಿ, ಶಶಿಕಲಾ ಶೆಟ್ಟಿ, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಆರಂಭಿಸಿದ್ದೇಕೆ ಎಂದು ತಿಳಿಸಿದ ಸತ್ಯಜಿತ್
2012ರ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ರಾಷ್ಟ್ರ ವ್ಯಾಪಿ ಹೋರಾಟದಲ್ಲಿ ಸುರತ್ಕಲ್‌ನ ನೂರಾರು ಜನರು ಭಾಗವಹಿಸಿದ್ದರು. ಇದರ ಸಹಭಾಗಿತ್ವದಲ್ಲಿ ಸುರತ್ಕಲ್‌ನಲ್ಲಿ ರಾಷ್ಟ್ರಭಕ್ತ ನಾಗರಿಕ ವೇದಿಕೆ (ರಿ.)‌ ಸ್ಥಾಪಿಸಲಾಯಿತು. ಇದು 2014ರಿಂದ ನಮಗೋಸ್ಕರ ತಮ್ಮ ಯೌವ್ವನವನ್ನು ದೇಶ ಸೇವೆಯ ಹೆಸರಿನಲ್ಲಿ ಮನೆ, ಮಠ, ಊರು, ಹೆತ್ತವರು, ಸಂಬಂಧಿಕರು, ಸ್ನೇಹಿತರಿಂದ ದೂರವಾಗಿ ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ, ರಾಜಸ್ಥಾನದ ಮರುಭೂಮಿಗಳಲ್ಲಿ, ಪೂರ್ವಾಂಚಲದ ಕಾಡು ಗುಡ್ಡೆಗಳಲ್ಲಿ ಕನಿಷ್ಠ 15 ವರ್ಷಗಳಿಂದ ಗರಿಷ್ಠ 40 ವರ್ಷಗಳವರೆಗೆ ದೇಶದ ಗಡಿ ಭಾಗದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ಬಿಸಿಲು ಮಳೆ ಚಳಿಯನ್ನು ಲೆಕ್ಕಿಸದೆ ಮುಡಿಪಾಗಿರುವ ಸೈನಿಕರಿಗೆ ಅಳಿಲು ಸೇವೆ ಮನಾಡಬೇಕೆಂಬ ಉದ್ದೇಶದಿಂದ ವೇದಿಕೆಯನ್ನು ಸ್ತಾಪಿಸಲಾಯಿತು. ಅದಕ್ಕಾಗಿ ಹೀಗೆ ವಿಶಿಷ್ಟವಾದ ರೀತಿಯಲ್ಲಿ ‘ಕಾರ್ಗಿಲ್ ವಿಜಯ ದಿವಸ’ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಸತ್ಯಜಿತ್‌ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಪ್ರೇರೇಪಿಸಿ ಸೈನ್ಯಕ್ಕೆ ಸೇರಲು ಮಾನಸಿಕವಾಗಿ ಅವರನ್ನು ದೃಢಗೊಳಿಸಲು ಭಾಷಣ ಮತ್ತು ಪ್ರಬಂಧ ಸ್ಪರ್ಧೆ ನಡೆಸಲಾಗುತ್ತದೆ. ಈ ವರ್ಷ ನಿವೃತ್ತ ಭೂಸೇನಾಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ನವೀನ್ ಕುಮಾರ್ ಆರ್ ಕೊಳ್ಳಿ ಅವರಿಂದ ಕನ್ನಡಕ್ಕೆ ಅನುವಾದಗೊಂಡ, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣಿ ಅವರ ಮುನ್ನುಡಿ ಹೊಂದಿರುವ ನಿವೃತ್ತ ಭೂಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ ಬರೆದಿರುವ ‘ಭಾರತೀಯ ಸೇನೆಯ ಹೇಳದಿರುವ ಕಥೆಗಳು” ಎಂಬ ಪುಸ್ತಕದ ಆಧಾರದಲ್ಲಿ ಈ ವಿಶಿಷ್ಠ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಎಂದಿನಂತೆ ಸುಮಾರು 450 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದನ್ನು ನಿವೃತ್ತ ವಾಯು ಸೇನಾಧಿಕಾರಿ ಕಾರ್ಪೊರಲ್ ಪುರುಷೋತ್ತಮ್ ಎಸ್ ಉದ್ಘಾಟಿಸಿದ್ದರು. ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಮಧ್ಯಾಹ್ನ ನಿವೃತ್ತ ಭೂಸೇನಾಧಿಕಾರಿ ಸುಬೇದಾರ್ ಮೇಜರ್ ಶಶಿಧರ್ ಆಳ್ವ ತನ್ನ ಸೇನಾ ದಿನದ ಅನುಭವ ಕಥನ ಹಂಚಿಕೊಂಡರೆ ನಿವೃತ್ತ ಭೂಸೇನ ಕಾರ್ಗಿಲ್‌ಯೋಧ ನಾಯಕ್ ಲೀಲಾಧರ ಕಡಂಬೋಡಿ ಉಪಸ್ಥಿತರಿದ್ದರು ಎಂದು ಸತ್ಯಜಿತ್‌ ಮೆಲುಕು ಹಾಕಿದರು.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!