ನವದೆಹಲಿ: ಯೆಮೆನ್ ಪ್ರಜೆಯ ಕೊಲೆಗೆ ಸಂಬಂಧಿಸಿದಂತೆ 2018 ರಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಿದ ಮರಣದಂಡನೆ ರದ್ದಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಜುಲೈ 16ರಂದು ಗಲ್ಲಿಗೇರಬೇಕಾಗಿದ್ದ ನಿಮಿಷ ಪ್ರಿಯಾ ಗಲ್ಲು ಶಿಕ್ಷೆಯನ್ನು ಭಾರತ ಸರ್ಕಾರದ ರಾಜತಾಂತ್ರಿಕ ಮಾತುಕತೆ ನಡೆಸಿ ರದ್ದು ಮಾಡುವಂತೆ ಆಗ್ರಹಿಸಿತ್ತು. ಇದೇ ಸಂದರ್ಭದಲ್ಲಿ ಕೇರಳ ಮೂಲದ ಮುಸ್ಲಿಯಾರ್, ‘ಭಾರತದ ಗ್ರ್ಯಾಂಡ್ ಮುಫ್ತಿ ಶೇಖ್ ಅಬೂಬಕ್ಕರ್ ಮುಸ್ಲಿಯಾರ್ ಯೆಮೆನ್ ಧಾರ್ಮಿಕ ಮುಖಂಂಡರೊಂದಿಗೆ ಮಾತುಕತೆ ನಡೆಸಿ, ಮರಣ ದಂಡನೆ ರದ್ದುಗೊಳಿಸಿ ಅದಕ್ಕೆ ಪ್ರತಿಯಾಗಿ ʻಬ್ಲಡ್ ಮನಿʼ ಸ್ವೀಕರಿಸುಂತೆ ಮನವಿ ಮಾಡಿದ್ದರು. ಅಂತಿಮವಾಗಿ ಹತ್ಯೆಗೀಡಾ ವ್ಯಕ್ತಿಯ ಕುಟುಂಬದವರ ಜೊತೆ ಮಾತಾಡಿ, ಬ್ಲಡ್ ಮನಿ ಸ್ವೀಕರಿಸುವಂತೆ ಮನವಿ ಮಾಡಿದ್ದರೂ ಸಹ, ಅವರು ಅದಕ್ಕೆ ಒಪ್ಪಿರಲಿಲ್ಲ.
ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ನರ್ಸ್ ನಿಮಿಷಾ ಪ್ರಿಯಾ ಗಲ್ಲು ರದ್ದಾಗಿದೆ ಎಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹೊರಹೊಮ್ಮುತ್ತಿದೆ. ನಿಮಿಷಾ ಪ್ರಿಯಾ ಮರಣದಂಡನೆಯನ್ನು ಯೆಮೆನ್ ರದ್ದುಗೊಳಿಸಿದೆ ಎಂದು ಪ್ರಸಿದ್ಧ ಧರ್ಮಬೋಧಕ, ಜಾಗತಿಕ ಶಾಂತಿ ಪ್ರವರ್ತಕ ಡಾ.ಕೆ.ಎ.ಪೌಲ್ ವಿಡಿಯೋ ಸಂದೇಶದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಡಾ. ಕಿಲಾರಿ ಆನಂದ್ ಪಾಲ್ ಅವರಯ ಭಾರತೀಯ ಮೂಲದ ಧರ್ಮಪ್ರಚಾರಕರಾಗಿದ್ದು ರಾಜಕಾರಣಿಯಾಗಿಯೂ ಆಗಿದ್ದಾರೆ. ಅವರು ಯುಎಸ್ ಮೂಲದ ಸಂಸ್ಥೆಗಳಾದ ಗ್ಲೋಬಲ್ ಪೀಸ್ ಇನಿಶಿಯೇಟಿವ್ (GPI) ಮತ್ತು ಗಾಸ್ಪೆಲ್ ಟು ದಿ ಅನ್‌ರೀಚ್ಡ್ ಮಿಲಿಯನ್ಸ್ (GUM) ಗಳ ಸ್ಥಾಪಕರು ಮತ್ತು ಹೈದರಾಬಾದ್‌ನಲ್ಲಿ ಚಾರಿಟಿ ಸಿಟಿ ಸೇರಿದಂತೆ ಅನಾಥಾಶ್ರಮಗಳನ್ನು ನಡೆಸುತ್ತಿದ್ದಾರೆ. ಡಾ.ಕೆ.ಎ.ಪೌಲ್ ಅವರು ನಿಮಿಷಾ ಪ್ರಿಯಾ ಮರಣದಂಡನೆ ರದ್ದುಗೊಳಿಸಿರುವುದಕ್ಕೆ ಯೆಮೆನ್ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿರುವುದಾಗಿ ವರದಿಯಾಗಿದೆ. ಆದರೆ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಮರಣ ದಂಡನೆ ಶಿಕ್ಷೆ ರದ್ದಾಗಿದೆ ಎಂಬ ಸುದ್ದಿ ಸ್ಫೋಟಿಸುತ್ತಿದ್ದಂತೆ ಇದರ ಕ್ರೆಡಿಟ್ ಮುಸ್ಲಿಯಾರ್‌ಗೆ ಸಲ್ಲಬೇಕೋ ಅಥವಾ ಮೋದಿ ಸರ್ಕಾರಕ್ಕೆ ಸಲ್ಲಬೇಕೋ ಎಂಬ ಬಗ್ಗೆ ಸೋಷಿಯಲ್ ಮೀಡಿಯಾ ವಾರ್ ಶುರುವಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕ್ರಿಶ್ಚಿಯನ್ ಕುಟುಂಬದ 38 ವರ್ಷದ ನರ್ಸ್ ನಿಮಿಷಾ ಪ್ರಿಯಾ, ಉತ್ತಮ ಉದ್ಯೋಗಾವಕಾಶಗಳನ್ನು ಹುಡುಕಲು 2008 ರಲ್ಲಿ ಯೆಮೆನ್‌ಗೆ ತೆರಳಿ ತಲಾಲ್ ಅಬ್ದೋ ಮಹ್ದಿ ಜೊತೆ ಪಾಲುದಾರಿಕೆ ಮಾಡಿಕೊಂಡು ಸನಾದಲ್ಲಿ ಕ್ಲಿನಿಕ್ ಸ್ಥಾಪಿಸಿದರು. ಮಹ್ದಿ ಆಕೆಯನ್ನು ತನ್ನ ಪತ್ನಿ ಎಂದು ಹೇಳಿಕೊಂಡು ಪಾಸ್‌ಪೋರ್ಟ್ ತಡೆಹಿಡಿದಿದ್ದ. 2017 ರಲ್ಲಿ, ಪ್ರಿಯಾ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ಪ್ರಯತ್ನಿಸಿದಾಗ, ಮಹ್ದಿಗೆ ನಿದ್ರಾಜನಕ ನೀಡಿದ್ದಳು. ಆದರೆ ದುದೃಷ್ಟವಶಾತ್ ಮೆಹ್ದಿ ಸಾವನ್ನಪ್ಪಿದ್ದ. 2018 ರಲ್ಲಿ ಆಕೆಗೆ ಮರಣದಂಡನೆ ವಿಧಿಸಿದ್ದು, ಯೆಮೆನ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ 2023 ರ ನವೆಂಬರ್‌ನಲ್ಲಿ ಮರಣದಂಡನೆಯನ್ನು ಎತ್ತಿಹಿಡಿಯಿತು
ಯೆಮೆನ್‌ನ ಹೌತಿ ನಿಯಂತ್ರಿತ ಸರ್ಕಾರದೊಂದಿಗೆ ಭಾರತಕ್ಕೆ ರಾಜತಾಂತ್ರಿಕ ಸಂಬಂಧವಿಲ್ಲದ ಕಾರಣ, ಪ್ರಿಯಾ ಅವರನ್ನು ಉಳಿಸುವ ಪ್ರಯತ್ನಗಳು ಮಹ್ದಿಯ ಕುಟುಂಬದಿಂದ ಕ್ಷಮಾದಾನ ಪಡೆಯಲು “ದಿಯಾ” (ರಕ್ತದ ಹಣ) ಮಾತುಕತೆ ಸೇರಿದಂತೆ ಅಸಾಂಪ್ರದಾಯಿಕ ಮಾರ್ಗಗಳನ್ನುಅನುಸರಿಸಲು ಸಾಧ್ಯವಾಗಿರಲಿಲ್ಲ. ಪ್ರಮುಖ ಸುನ್ನಿ ವಿದ್ವಾಂಸ ಮತ್ತು ಅಖಿಲ ಭಾರತ ಸುನ್ನಿ ಜಮಿಯ್ಯತುಲ್ ಉಲಮಾದ ನಾಯಕ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಪ್ರಿಯಾ ಅವರ ಮರಣದಂಡನೆಯನ್ನು ವಿಳಂಬಗೊಳಿಸುವಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.