ಪೋಷಕರೇ ಮಕ್ಕಳನ್ನು ಖಾಸಗಿ ಮಿನಿ ಬಸ್‌ಗಳಲ್ಲಿ ಕಳುಹಿಸುವಾಗ ಎಚ್ಚರ?

ಪೋಷಕರೇ ನಿಮ್ಮ ಮಕ್ಕಳನ್ನು ಖಾಸಗಿ ಮಿನಿ ಬಸ್‌ಗಳಲ್ಲಿ ಕಳುಹಿಸುತ್ತಿದ್ದೀರಾ? ಹಾಗಾದರೆ ಈ ಸುದ್ದಿಯನ್ನೊಮ್ಮೆ ಓದಿ ಇನ್ನಾದರೂ ಎಚ್ಚರಿಕೆ ವಹಿಸಬೇಕಾಗಿದೆ. ಇಲ್ಲದೇ ಹೋದರೆ ನಿಮ್ಮ ಮಕ್ಕಳು ದೊಡ್ಡದೊಂದು ಗಂಡಾಂತರಕ್ಕೆ ಸಿಲುಕಬಹುದು. ಸರ್ಕಾರದ ಯಾವ ಮಾರ್ಗದರ್ಶಿಯನ್ನೂ ಪಾಲಿಸದೆ ಮಕ್ಕಳನ್ನು ಕುರಿಮಂದೆಯಂತೆ ತುಂಬಿಸಿ ಸಾಗಿಸುತ್ತಿರುವ ಮಂಗಳೂರಿನ ಕೆಲವೊಂದು ಖಾಸಗಿ ಮಿನಿ ಬಸ್‌ಗಳು ಮಕ್ಕಳ ಪಾಲಿಗೆ ನಿಜವಾದ ವಿಲನ್‌ಗಳಾಗಿ ಬದಲಾಗಿವೆ.

ಅವಳ ಹೆಸರು ಅನಿತಾ…. ಅವಳ ಮಗಳು ತನ್ವಿ ಎಲ್‌ಕೆಜಿ ಮುಗಿಸಿ ಒಂದನೇ ಕ್ಲಾಸಿಗೆ ಸೇರಿದ್ದಾಳೆ. ತನ್ವಿ ಎಲ್‌ಕೆಜಿ ಹೋಗುತ್ತಿದ್ದರಿಂದ ಶಾಲೆಯೆಂದ್ರೆ ಅವಳಿಗೆ ಯಾವ ಭಯವೂ ಇರಲಿಲ್ಲ. ಹೊಸ ಬ್ಯಾಗ್‌, ಹೊಸ ಪುಸ್ತಕ, ಕಂಪಾಸ್‌ ಇತ್ಯಾದಿಗಳನ್ನು ಖುಷಿ ಖುಷಿಯಿಂದಲೇ ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದ ತನ್ವಿ ಕ್ರಮೇಣ ಅವಳ ಲವಲವಿಕೆ ಕಡಿಮೆಯಾಗುತ್ತಾ ಬರುತ್ತಿತ್ತು. ಎಲ್‌ಕೆಜಿಯಲ್ಲಿ ಖುಷಿ ಖುಷಿಯಾಗಿ ಹೋಗುತ್ತಿದ್ದ ತನ್ವಿ ಶಾಲೆಗೆ ಹೋಗಲು ಆರಂಭಿಸಿದಂದಿನಿಂದ ಭಯ ಪಡುತ್ತಿದ್ದಳು. ಅಳುಕುತ್ತಿದ್ದಳು. ರಾತ್ರಿ ನಿದ್ರೆಯಲ್ಲಿ ಬೆಚ್ಚಿ ಬೀಳುತ್ತಿದ್ದಳು. ನಾನು ಶಾಲೆಗೆ ಹೋಗೋದಿಲ್ಲ ಅಂತ ಹಠ ಹಿಡಿಯುತ್ತಿದ್ದಳು. ಶಾಲೆಗೆ ಹೋಗಲು ಎಂದೂ ಭಯಪಡದ ಹುಡುಗಿ ಹೀಗ್ಯಾಕೆ ಮಾಡುತ್ತಿದ್ದಾಳೆ ಎಂದು ಅನಿತಾಗೆ ಅಂದಾಜಾಗಿರಲಿಲ್ಲ. ಯಾಕೆಂದು ಕೇಳುವಾಗ ತನಗಾಗುವ ಸಮಸ್ಯೆಯನ್ನು ಸ್ಪಷ್ಟವಾಗಿ ತಿಳಿಸುವಂತ ವಯಸ್ಸೂ ಅವಳದ್ದಾಗಿರಲಿಲ್ಲ.

ಕ್ರಮೇಣ ಅನಿತಾಗೆ ಗೊತ್ತಗಿದ್ದೇನೆಂದರೆ, ಅವಳು ತನ್ನ ಮಗಳನ್ನು ಮಿನಿ ಬಸ್‌ನಲ್ಲಿ ಕಳಿಸುತ್ತಿದ್ದಳು. ಆ ಬಸ್‌ನಲ್ಲಿ ಲೆಕ್ಕಕ್ಕಿಂತ ಜಾಸ್ತಿ ಮಕ್ಕಳಿದ್ದುದರಿಂದ ಮಕ್ಕಳನ್ನು ಮೇಲೆ ಒಬ್ಬರು ಕರಿಗಳನ್ನು ಸಾಗಿಸುವಂತೆ ಸಾಗಿಸಲಾಗುತ್ತಿತ್ತು. ದೊಡ್ಡ ಮಕ್ಕಳು ಸೀಟಿಗಾಗಿ ಗಲಾಟೆ ಮಾಡುತ್ತಿದ್ದರಿಂದ ಇದರ ನಡುವೆ ಸಿಲುಕುವ ತನ್ವಿಗೆ ಏಟಾಗಿ ನೋವಾಗುತ್ತಿತ್ತು. ಬಸ್‌ನಲ್ಲಿ ಡ್ರೈವರ್‌ ಮಾತ್ರ ಇರುತ್ತಿದ್ದ. ಮಕ್ಕಳನ್ನು ಹತ್ತಿಸಲು ಇಳಿಸಲು ಆಯ ಇರಲಿಲ್ಲ. ಡ್ರೈವರ್‌ ಅವಸರವಸರವಾಗಿ ಹತ್ತಿಸುತ್ತಿದ್ದ, ಅವನು ಜೋರಾಗಿ ಗದರುತ್ತಿದ್ದುದರಿಂದ ತನ್ವಿ ಭಯ ಪಡುತ್ತಿದ್ದಳು. ಅವಳು ಅಷ್ಟು ದೊಡ್ಡ ಬ್ಯಾಗ್‌, ಕೊಡೆ ಹಿಡಿಯುತ್ತಿದ್ದುದರಿಂದ ಅವಳಿಗೆ ಬಸ್‌ನಿಂದ ಇಳಿಯಲು ಹತ್ತಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ತನ್ವಿ ಬಸ್‌ ಅಂದ್ರೇ ಭಯ ಪಡುತ್ತಿದ್ದಾಳೆ ಎನ್ನುವುದನ್ನು ಅನಿತಾ ಅರ್ಥ ಮಾಡಿಕೊಂಡರು.

ನೋಡಿ ಇದು ಕೇವಲ ತನ್ವಿಯ ಕಥೆ ಮಾತ್ರವಲ್ಲ. ಇಂಥಾ ಅನೇಕ ತನ್ವಿಗಳು ನಮ್ಮಲ್ಲಿದ್ದಾರೆ. ಮುಖ್ಯವಾಗಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ಸ್ಕೂಲ್‌ ಬಸ್‌ಗಳಿರುವುದಿಲ್ಲ. ಮಕ್ಕಳನ್ನು ಬಸ್‌ಗಳಲ್ಲಿ ಕಳಿಸಲು ಹೆತ್ತವರಿಗೆ ಭಯ. ಅದಕ್ಕಾಗಿ ಊರಿನ ಖಾಸಗಿ ಮಿನಿ ಬಸ್‌ಗಳಲ್ಲಿ ಮಕ್ಕಳನ್ನು ಕಳಿಸುತ್ತಾರೆ. ಈ ಮಿನಿಬಸ್‌ಗಳಲ್ಲಿ ಮಕ್ಕಳನ್ನು ಲೆಕ್ಕಕ್ಕಿಂತ ಜಾಸ್ತಿ ತುಂಬಿಸಲಾಗುತ್ತದೆ. ಮಕ್ಕಳನ್ನು ಹತ್ತಿ ಇಳಿಸಲು ಮಾಮೂಲಿ ಸ್ಕೂಲ್‌ ಬಸ್‌ಗಳಂತೆ ಆಯಾಗಳಿರುವುದಿಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಕಳಿಸುವಾಗ ಎಚ್ಚರಿಕೆ ವಹಿಸುವು ಸೂಕ್ತ.

ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕಿದೆ!
ಸಾಧಾರಣವಾಗಿ ಮಕ್ಕಳನ್ನು ಖಾಸಗಿ ವಾಹನಗಳಲ್ಲಿ ಕಳಿಸುವಾಗ ಸಾಕಷ್ಟು ಮಾರ್ಗದರ್ಶಿಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ಖಾಸಗಿ ವಾಹನ ಮಾಲಕರು ಮಾರ್ಗದರ್ಶಿಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳಿವೆ. ಅಟೋ ರಿಕ್ಷಾಗಳಲ್ಲೂ ಅಳತೆ ಮೀರಿ ಮಕ್ಕಳನ್ನು ಸಾಗಿಸಲಾಗುತ್ತಿದೆ. ಕೆಲವು ವರ್ಷಗಳ ಮುಂಚೆ ಕುಂದಾಪುರದ ಬೈಂದೂರಿನಲ್ಲಿ ಸ್ಕೂಲ್‌ ಬಸ್‌ ದುರಂತ ಸಂಭವಿಸಿ ಹಲವು ಪುಟಾಣಿಗಳು ಮೃತಪಟ್ಟ ಬಳಿಕ ಸ್ಕೂಲ್‌ ಬಸ್‌ಗಳಿಗೆ ಮಾರ್ಗದರ್ಶಿ ನಿಯಮಗಳನ್ನು ಬಿಗಿಗೊಳಿಸಲಾಗಿತ್ತು. ಆದರೆ ಇದೀಗ ಜಿಲ್ಲಾಡಳಿತ ಸ್ಕೂಲ್‌ ಬಸ್‌, ಖಾಸಗಿ ಸ್ಕೂಲ್‌ ಬಸ್‌ಗಳತ್ತ ಗಮನ ಹರಿಸುತ್ತಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕಾಗಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!