ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಇಲ್ಲಿನ ಹಳೇ ವಿದ್ಯಾರ್ಥಿ, ಪತ್ರಕರ್ತ ಪೌಲೋಸ್ ಬೆಂಜಮಿನ್ ಸ್ಮರಣಾರ್ಥ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ, ಪೌಲ್ಸ್ ಮೆಮೋರಿಯಲ್ ಪ್ರಾವಿಡೆನ್ಸ್ , ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ಸಹಯೋಗದೊಂದಿಗೆ ನಗರದ ಬಾವುಟಗುಡ್ಡೆಯ ಅಲೋಶಿಯಸ್ ಸಂಸ್ಥೆಯ ಅರ‍್ರುಪೆ ಬ್ಲಾಕ್ ಆಡಿಟೋರಿಯಂ (ಎ.ಆರ್. 803)ನಲ್ಲಿ ಜು.12 ಬೆಳಿಗ್ಗೆ 9 ಕ್ಕೆ ರಕ್ತದಾನ ಶಿಬಿರ ನಡೆಯಲಿದೆ.
ಈ ಶಿಬಿರವು 2013-15 ಬ್ಯಾಚಿನ ಎನ್ ಎಸ್ ಎಸ್‌ನ ನಿಷ್ಠಾವಂತ ಸ್ವಯಂಸೇವಕ ಪಾಲೋಸ್ ಬೆಂಜಮಿನ್ ಅವರ ಸ್ಮರಣಾರ್ಥವಾಗಿ ನಡೆಯುತ್ತಿದೆ. ಅವರ ಸೇವಾ ಮನೋಭಾವನೆಯನ್ನು ಗೌರವಿಸುವ ಹಾಗೂ ಅವರ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕೆಎಂಸಿ ಬ್ಲಡ್ ಸೆಂಟರ್‌ನ ನಿರ್ದೇಶಕಿ ಡಾ. ದೀಪಾ ಅಡಿಗ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸೆಂಟ್ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ. ಅಲ್ವಿನ್ ಡಿಸಾ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪೌಲ್ಸ್ ಮೆಮೊರಿಯಲ್ ಪ್ರಾವಿಡೆನ್ಸ್ ನ ಪ್ರತಿನಿಧಿ ಜೀವನ್ ಅವರು ಗೌರವ ಅತಿಥಿಯಾಗಿ ಉಪಸ್ಥಿತರಿರುವರು.
ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ನ ಅಡಿಯಲ್ಲಿ ನಡೆಯುತ್ತಿರುವ ಈ ಶಿಬಿರವು ಎನ್‌ಎಸ್‌ಎಸ್ ನ ಮೂಲ ಸಿದ್ಧಾಂತವಾದ “ನಾನು ಅಲ್ಲ, ನೀನು” ಎಂಬ ಸದುದ್ದೇಶವನ್ನು ಪ್ರತಿಬಿಂಬಿಸುತ್ತದೆ. ಅಲೋಶಿಯಸ್ ಪರಿಗಣಿಸಲ್ಪಟ್ಟ ವಿ.ವಿ.ಯ ಎನ್‌ಎಸ್‌ಎಸ್ ಕಾರ್ಯದರ್ಶಿಗಳು, ಕಾರ್ಯಕ್ರಮಾಧಿಕಾರಿಗಳು ಮತ್ತು ಪೌಲ್ಸ್ ಮೆಮೊರಿಯಲ್ ಪ್ರಾವಿಡೆನ್ಸ್ ತಂಡವು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಾರ್ವಜನಿಕರನ್ನು ರಕ್ತದಾನಕ್ಕೆ ಆಹ್ವಾನಿಸಿದೆ.
ಪತ್ರಕರ್ತ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಪೌಲ್ ಕೊಳ್ಳೇಗಾಲ ನಿವಾಸಿಯಾಗಿದ್ದ ಪೌಲ್ ಬೆಂಜನಮಿನ್, ಉಜಿರೆ ಎಸ್‌ಡಿಎಂ ಕಾಲೇಜು ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದರು. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು ಮಂಗಳೂರಿನಲ್ಲಿ ಉದಯವಾಣಿಯಲ್ಲಿ ವೆಬ್ ಕಂಟೆಂಟ್ ಡೆವಲಪರ್ ಹಾಗೂ ವೀಡಿಯೋ ಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸಿದ್ದರು. ಚಾರಣ ಪ್ರೇಮಿಯಾಗಿದ್ದ ಪೌಲ್, ಪತ್ರಕರ್ತರ ಚಾರಣ ಬಳಗದ ಸದಸ್ಯರಾಗಿ, ಉಳ್ಳಾಲದ ಪತ್ರಕರ್ತರ ಉತ್ತಮ ಬಾಂಧವ್ಯದಲ್ಲಿದ್ದವರು. 2021 ರ ಬಳಿಕ ಬೆಂಗಳೂರಿನ ಸೈಂಟ್ ಪೌಲ್ಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಜೂ.19ಕ್ಕೆ ಕೊಳ್ಳೇಗಾಲ ಥೋಮರ್ ಪಾಳ್ಯದಿಂದ ಬೆಂಗಳೂರಿಗೆ ಕಾರಿ
ನಲ್ಲಿ ಸಂಬಂಧಿಕರ ಜೊತೆಗೆ ತೆರಳುತ್ತಿದ್ದ ಸಂದರ್ಭ ಬಿಡದಿ ಸಮೀಪ ಕಾರು-ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರು ಸಂಬಂಧಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪೌಲ್ ಅವರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೆ 2023ರ ಜು. 11 ಕ್ಕೆ ಎಲ್ಲರನ್ನು ಅಗಲಿದ್ದರು. ಮೃತ ಪೌಲ್ ಸ್ಮರಣಾರ್ಥ ಸಹೋದರರು, ಸ್ನೇಹಿತರು ಸೇರಿಕೊಂಡು ಪೌಲ್ಸ್ ಮೆಮೋರಿಯಲ್ ಪ್ರಾವಿಡೆನ್ಸ್ ಸ್ಥಾಪಿಸಿ ರಾಜ್ಯದಾದ್ಯಂತ ವಿವಿಧ ಸಮಾಜ ಸೇವೆಗಳನ್ನು ನಡೆಸಿಕೊಂಡು ಬಂದಿದ್ದಾರೆ