ವಿಜಯಪುರ: ಬರೋಬ್ಬರಿ 27 ವರ್ಷಗಳ ಹಿಂದೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಗುರಿಯಾಗಿಸಿ ನಡೆಸಲಾಗಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ನಿಷೇಧಿತ ಉಗ್ರ ಸಂಘಟನೆ ಅಲ್ ಉಮ್ಮಾದ ಪ್ರಮುಖ ಶಂಕಿತ ಉಗ್ರ ಎ.ಸಾದಿಕ್ ರಾಜಾ ಅಲಿಯಾಸ್ ಟೈಲರ್ ರಾಜಾ(50)ನನ್ನು ವಿಜಯಪುರದಲ್ಲಿ ತಮಿಳುನಾಡಿನ ಭಯೋತ್ಪಾದನ ನಿಗ್ರಹ ದಳದ ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1998ರ ಫೆ.14ರಂದು ತಮಿಳುನಾಡಿನ ಕೊಯಮತ್ತೂರಿನ 11 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗೊಂಡು ಬರೋಬ್ಬರಿ 58 ಜನ ಮೃತಪಟ್ಟಿದ್ದರು. ಅಲ್ಲದೆ 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಅದೇ ದಿನ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ಕಾರ್ಯಕ್ರಮವೂ ಇತ್ತು. ಹಾಗಾಗಿ ಆಡ್ವಾಣಿ ಅವರನ್ನೇ ಗುರಿಯಾಗಿಸಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು.
ಈ ಪ್ರಕರಣದ ಆರೋಪಿ ಶಂಕಿತ ಉಗ್ರ ಸಿದ್ದಿಕಿ ರಾಜ್ 27 ವರ್ಷಗಳಿಂದ ತಲೆಮರೆಸಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಅಡಗಿದ್ದ. ಆದರೆ 12 ವರ್ಷಗಳ ಹಿಂದೆ ವಿಜಯಪುರ ನಗರಕ್ಕೆ ಆಗಮಿಸಿ ನಗರದಲ್ಲೇ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನ್ನಲ್ಲದೆ ಹುಬ್ಬಳ್ಳಿ ಮೂಲದ ಮಹಿಳೆಯನ್ನು ಮದುವೆಯಾಗಿ ಹಾಯಾಗಿದ್ದ ಎಂದು ಹೇಳಲಾಗಿದೆ.
ತಮಿಳುನಾಡು ಪೊಲೀಸರು ಈತನ ಪತ್ತೆಗೆ ಬ;ಎ ಬೀಸಿದ್ದು, ಗುರುವಾರ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ಕರೆದೊಯ್ದಿದ್ದಾರೆ. ಈತ ಕೊಯಮತ್ತೂರು ಸ್ಫೋಟ ಸಹಿತ ಇತರ ಪ್ರಕರಣಗಳಲ್ಲೂ ಭಾಗಿಯಾಗಿದ್ದು, ತನಿಖಾ ದೃಷ್ಟಿಯಿಂದ ಜಿಲ್ಲಾ ಪೊಲೀಸರಿಗೂ ತಮಿಳುನಾಡು ತನಿಖಾಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.
29 ವರ್ಷಗಳಿಂದಲೂ ಪೊಲೀಸರ ಕೈಗೆ ಸಿಗದ ಹಾಯಾಗಿ ಓಡಾಡಿಕೊಂಡಿದ್ದ ಆರೋಪಿ
ಪೊಲೀಸರ ಪ್ರಕಾರ, ರಾಜಾ ಕಳೆದ 29 ವರ್ಷಗಳಿಂದಲೂ ಪೊಲೀಸರ ಬಲೆಗೆ ಬಿದ್ದಿರಲಿಲ್ಲ.. 1998 ರ ಸರಣಿ ಬಾಂಬ್ ಸ್ಫೋಟಗಳ ಜೊತೆಗೆ, ಅವನು ಹಲವಾರು ಭಯೋತ್ಪಾದನಾ ಪ್ರಕರಣಗಳು ಮತ್ತು ಕೋಮು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು, ಇದರಲ್ಲಿ 1996 ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಮೊಲೊಟೊವ್ ಕಾಕ್ಟೈಲ್ ದಾಳಿ ನಡೆಸಿದ್ದು, ಪರಿಣಾಮವಾಗಿ ಜೈಲು ವಾರ್ಡನ್ ಭೂಪಾಲನ್ ಸಾವನ್ನಪ್ಪಿದ್ದರು., 1996 ರಲ್ಲಿ ನಾಗೋರ್‌ನಲ್ಲಿ ಸಯೀತಾ ಕೊಲೆ ಪ್ರಕರಣ ಮತ್ತು 1997 ರಲ್ಲಿ ಮಧುರೈನಲ್ಲಿ ಜೈಲರ್ ಜಯಪ್ರಕಾಶ್ ಕೊಲೆ ಕೂಡಾ ಸೇರಿವೆ.
ಇತ್ತೀಚೆಗೆ, ಎಟಿಎಸ್, ಕೊಯಮತ್ತೂರು ನಗರ ಪೊಲೀಸರೊಂದಿಗೆ ಸೇರಿ, ಭಾರತದ ಮೋಸ್ಟ್ ವಾಂಟೆಡ್ ಆರೋಪಿಗಳಾದ ಅಬೂಬಕರ್ ಸಿದ್ದಿಕ್ ಮತ್ತು ಮೊಹಮ್ಮದ್ ಅಲಿ ಅಲಿಯಾಸ್ ಯೂನಸ್ ಅವರನ್ನು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಿಂದ ಬಂಧಿಸಿತ್ತು. ಕೊಯಮತ್ತೂರಿನಲ್ಲಿ 1998 ರ ಸ್ಫೋಟದ ಸಂತ್ರಸ್ತರಿಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಿ ಗೌರವ ಸಲ್ಲಿಸಿದರು. ಕರ್ನಾಟಕದಲ್ಲಿ ರಾಜಾ ಬಂಧನವು ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಮೂರನೇ ಯಶಸ್ವಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಯಮತ್ತೂರಿನಲ್ಲಿ ನಡೆದ ಸ್ಫೋಟಕ್ಕೆ ಕಾರಣ
1997ರ ನವೆಂಬರ್– ಡಿಸೆಂಬರ್‌ನಲ್ಲಿ ಕೊಯಮತ್ತೂರಿನಲ್ಲಿ ಹಿಂದೂ–ಮುಸ್ಲಿಂ ಗಲಾಟೆಗಳು ನಡೆದಿದ್ದವು. ಆಲ್ ಉಮ್ಮಾ ಸಂಘಟನೆಯ ಕಾರ್ಯಕರ್ತನನ್ನು ಬಂಧಿಸಿದ್ದಾರೆ ಎಂದು ಆ ಸಂಘಟನೆಯ ಕೆಲವರು ಸ್ಥಳೀಯ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಪ್ರತಿಯಾಗಿ ಕೊಯಮತ್ತೂರಿನಲ್ಲಿ ಸರಣಿ ಕೋಮು ಗಲಭೆಗಳು ನಡೆದಿದ್ದವು.
ಆ ಗಲಭೆಗಳಲ್ಲಿ 18 ಮುಸ್ಲಿಮರು, 2 ಹಿಂದೂಗಳು ಸೇರಿ 20 ಜನ ಮೃತರಾಗಿದ್ದರು. ಇದಕ್ಕೆ ಪ್ರತಿಯಾಗಿ ಟೈಲರ್ ರಾಜಾ ಹಾಗೂ ಇತರರು ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು. 1998 ಫೆಬ್ರುವರಿ 14 ರಂದು ಅಡ್ವಾಣಿ ಅವರು ಕೊಯಮತ್ತೂರಿಗೆ ಚುನಾವಣಾ ಸಭೆಗೆ ಬಂದಿದ್ದರು. ಅವರು ಬರುವ ಸಮಯದಲ್ಲಿ ಕೊಯಮತ್ತೂರಿನ 12 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 12 ಸ್ಥಳಗಳಲ್ಲಿ 11 ಸರಣಿ ಬಾಂಬ್ ಸ್ಫೋಟಗೊಂಡು 58 ಜನ ಮೃತರಾಗಿದ್ದರು. 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಪೊಲೀಸ್ ಮುಂಜಾಗ್ರತೆಯಿಂದ ಎಲ್.ಕೆ ಅಡ್ವಾಣಿ ಬದುಕುಳಿದಿದ್ದರು.
.