ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ ನಂತರ, ಭಾರತ ಸರ್ಕಾರ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಆ ಸಂದರ್ಭದಲ್ಲಿ, ಪಾಕಿಸ್ತಾನ ಕೂಡ ಭಾರತದ ಕಾರ್ಯಾಚರಣೆಗೆ ಪ್ರತಿರೋಧ ತೋರಿತ್ತು. ಆದರೆ, ಪಾಕಿಸ್ತಾನ ನಡೆಸಿದ್ದ ಪ್ರತಿಯೊಂದು ದಾಳಿಯ ಹಿಂದೆ, ಚೀನಾ ಹಾಗೂ ಟರ್ಕಿ ಇದ್ದವು ಎಂದು ಭಾರತೀಯ ಸೇನೆಯ ಮುಖ್ಯಸ್ಥ ಲೆಫ್ಟನೆಂಟ್ ಜನರಲ್ ರಾಹುಲ್ ಆರ್. ಸಿಂಗ್ ಅವರು ಹೇಳಿದ್ದಾರೆ.
ಜು. 4ರಂದು ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಕ್ಕೆ ಭಾರತ ವಿರುದ್ಧ ದಾಳಿ ನಡೆಸಲು ಭಾರತದ ಬಗ್ಗೆ ನಿಖರವಾದ ಮಾಹಿತಿಗಳು ಬೇಕಿದ್ದವು. ಅದರರ್ಥ, ಭಾರತದಲ್ಲಿರುವ ಪ್ರಮುಖವಾದ ಕಟ್ಟಡಗಳು, ಸಾರ್ವಜನಿಕ ಸ್ಥಳಗಳು, ವಿದ್ಯಾಕೇಂದ್ರಗಳು, ವಿಐಪಿಗಳ ಮನೆಗಳು… ಹೀಗೆ ಅನೇಕ ಮಾಹಿತಿಗಳು ಬೇಕಿದ್ದವು. ಆ ಮಾಹಿತಿಗಳನ್ನು ರವಾನಿಸಿದ್ದು ಚೀನಾ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.
“ಭಾರತದ ಪ್ರಮುಖ ಪ್ರದೇಶಗಳ ಮಾಹಿತಿ ಸಿಕ್ಕರೆ ಸಾಕೇ, ಅಂಥ ಸ್ಥಳಗಳನ್ನು ಧ್ವಂಸ ಮಾಡಲು ಅಗತ್ಯ ಕ್ಷಿಪಣಿಗಳು ಬೇಕು ಹಾಗೂ ಅವುಗಳನ್ನು ಉಡಾಯಿಸಲು, ನಿಯಂತ್ರಿಸಲು ನುರಿತ ತಂತ್ರಜ್ಞರು ಬೇಕು. ಅಂಥ ಶಕ್ತಿಶಾಲಿ ಕ್ಷಿಪಣಿಗಳನ್ನು ಹಾಗೂ ಅವುಗಳ ತಜ್ಞರನ್ನು ಟರ್ಕಿ ದೇಶವು ಪಾಕಿಸ್ತಾನಕ್ಕೆ ಕಳುಹಿಸಿತ್ತು. ಈ ರೀತಿಯಾಗಿ, ಭಾರತದ ವಿರುದ್ಧದ ಕಾರ್ಯಾಚರಣೆಗೆ ಚೀನಾ ಹಾಗೂ ಟರ್ಕಿ – ಈ ಎರಡೂ ದೇಶಗಳು ಕೆಲಸ ಮಾಡಿದ್ದರು” ಎಂದು ತಿಳಿಸಿದ್ದರು.
“ಅಸಲಿಗೆ, ಚೀನಾವು ಈ ರೀತಿಯಾಗಿ ಪಾಕಿಸ್ತಾನಕ್ಕೆ ಡೇಟಾ ರವಾನಿಸಿದ್ದರ ಹಿಂದೆ ಅದರ ಸ್ವಾರ್ಥವೂ ಅಡಗಿತ್ತು. ಏಕೆಂದರೆ, ಇಂದು ಪಾಕಿಸ್ತಾನದಲ್ಲಿರುವ ಶೇ. 81ರಷ್ಟು ಶಸ್ತ್ರಾಸ್ತ್ರಗಳು ಚೀನಾ ದೇಶದ್ದು. ಚೀನಾಕ್ಕೂ ಆ ಶಸ್ತ್ರಾಸ್ತ್ರಗಳು, ಬೇರೆ ದೇಶಗಳ ಶಸ್ತ್ರಾಸ್ತ್ರಗಳ ಜೊತೆಗೆ ಹೇಗೆ ಪೈಪೋಟಿ ನೀಡಬಲ್ಲದು ಎಂಬುದನ್ನು ಚೀನಾ ಖಚಿತಪಡಿಸಿಕೊಳ್ಳಬೇಕಿತ್ತು. ಆ ಹಿನ್ನೆಲೆಯಲ್ಲಿ ಚೀನಾ, ಪಾಕಿಸ್ತಾನಕ್ಕೆ ಭಾರತದ ಡೇಟಾವನ್ನು ರವಾನಿಸಿತ್ತು” ಎಂದು ಸಿಂಗ್ ತಿಳಿಸಿದ್ದಾರೆ.