ಮಂಗಳೂರು: ಕಳೆದ ಐದು ವರ್ಷಗಳ ಹಿಂದೆ ಮುಲ್ಕಿ ವಿಜಯ ಸನ್ನಿಧಿ ಹೆದ್ದಾರಿ ಬಳಿ ಹಾಡಹಗಲಿನಲ್ಲೇ ಉದ್ಯಮಿ ಅಬ್ದುಲ್ ಲತೀಫ್ ಎಂಬವರನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳ ಪೈಕಿ ತಲೆಮರೆಸಿಕೊಂಡಿದ್ದ ಆರೋಪಿ ಪಕ್ಷಿಕೆರೆ ಕೆಮ್ರಾಲ್ ನಿವಾಸಿ ಮೊಹಮ್ಮದ್ ಮುಸ್ತಫಾ @ ಮುಸ್ತಾನನ್ನು ಪೊಲೀಸರ ವಿಶೇಷ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಘಟನೆಯ ವಿವರ: 2020ರ ಜೂನ್ 5ರಂದು ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಲ್ಕಿ ವಿಜಯ ಸನ್ನಿದಿ ಹೆದ್ದಾರಿ ಬಳಿ ಅಬ್ದುಲ್ ಲತೀಫ್ ಎಂಬವನನ್ನು ಹಾಡಹಗಲಿನಲ್ಲಿಯೇ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕೃತ್ಯದಲ್ಲಿ ಆರೋಪಿಗಳಾದ ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾಫ ಮತ್ತು ಇತರರು ಸೇರಿ ಒಟ್ಟು 10 ಮಂದಿ ಶಾಮೀಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಈ ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣಾ ಹಂತದಲ್ಲಿರುತ್ತದೆ.

ಆರೋಪಿಗಳ ಪೈಕಿ ಮೊಹಮ್ಮದ್ ಮುಸ್ತಫಾ ಉಚ್ಛ ನ್ಯಾಯಾಲಯದಲ್ಲಿ ದಿನಾಂಕ 19-10-2020 ರಂದು ಜಾಮೀನು ಪಡೆದಿದ್ದ. ಆ ನಂತರ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಿನಾಂಕ 22-04-2022 ರಂದು ಜಾಮೀನು ರದ್ದಾಗಿತ್ತು. ಅಂದಿನಿಂದ ಆರೋಪಿ ಮೊಹಮ್ಮದ್ ಮುಸ್ತಫಾ ತಲೆಮರೆಸಿಕೊಂಡು ನಕಲಿ ಪಾಸ್ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದ. ತಲೆಮರೆಸಿಕೊಂಡ ವಾರಂಟು ಅಸಾಮಿ ಮೊಹಮ್ಮದ್ ಮುಸ್ತಫಾ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು.
ಆರೋಪಿ ಇತ್ತೀಚೆಗೆ ಊರಿಗೆ ಬಂದಿದ್ದು ಮಾಹಿತಿ ಪಡೆದ ಪೊಲೀಸರ ರಂದ ದಿನಾಂಕ 30-06-2025 ರಂದು ಮುಲ್ಕಿಯ ಪಕ್ಷಿಕೆರೆ ಬಳಿ ಪತ್ತೆ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ವಿಚಾರಣೆಯ ವೇಳೆ, ತಾನು ನಕಲಿ ಪಾಸ್ಪೋರ್ಟ್ ಪಡೆದು ಓಮನ್ ರಾಷ್ಟ್ರಕ್ಕೆ ಪರಾರಿಯಾಗಿ ಅಲ್ಲಿಂದ ನೇಪಾಳ ಮೂಲಕ ಭಾರತ ದೇಶಕ್ಕೆ ಬಂದಿರುವುದಾಗಿ ಮಾಹಿತಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ವಿದೇಶ ಮತ್ತು ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ ಪ್ರಕರಣ ಕೂಡಾ ಮೂಲ್ಕಿ ಠಾಣೆಯಲ್ಲಿ ದಾಖಲಾಗಿದ್ದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಆರೋಪಿ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದನು.
ಈತನ ವಿರುದ್ದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬಗ್ಗೆ ಮತ್ತು ನಕಲಿ ಪಾಸ್ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸನಗುಡಿ ಪೊಲೀಸ್ ಠಾಣೆಯ ಪ್ರಕರಣ ದಾಖಲಾದೆ. ಅಲ್ಲದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಈತನ ವಿರುದ್ಧ ಎರಡು ಪ್ರಕರಣಗಳಲ್ಲಿ ವಾರಂಟು ಬಾಕಿ ಇದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.
ಬಂಧಿತ ಆರೋಪಿ ಮೊಹಮ್ಮದ್ ಮುಸ್ತಫಾ @ ಮುಸ್ತಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.