ಮಡಂತ್ಯಾರು: ಮಗನ ಸಾವಿನ ಬೇಜಾರಿನಲ್ಲಿದ್ದ ಮಹಿಳೆಯೋರ್ವರು ಕೊಯ್ಯೂರಿನ ಮಲೆಬೆಟ್ಟಿನಲ್ಲಿರುವ ತಾಯಿ ಮನೆಯಿಂದ ನಾಪತ್ತೆಯಾದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ.ರೋಡ್‌ನ ಕಾರಿಂಜದ ಮಹಮ್ಮದ್ ಸಲೀಂ ಅವರ ಪತ್ನಿ ರಝೀನ (24) ನಾಪತ್ತೆಯಾದವರು.
ರಝೀನಾ ಅವರ 2 ವರ್ಷದ ಮಗ 40 ದಿನಗಳ ಹಿಂದೆ ಸಾವನ್ನಪ್ಪಿದ್ದ. ಬಳಿಕ ತವರಿನಲ್ಲಿದ್ದ ರಝೀನ ಜೂ. 22ರಂದು ಸಂಜೆ ಕಾರಿಂಜದ ಮನೆಗೆ ಹೋಗುತ್ತೇನೆಂದು ಹೊರಟಿದ್ದರು. ಆದರೆ ಅಲ್ಲಿಗೆ ತಲುಪಿರಲಿಲ್ಲ. ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗದ ಕಾರಣ ಮನೆಯವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ದುಂಡುಮುಖ, ಅಗಲ ಹಣೆ, ಕಪ್ಪು ತಲೆಕೂದಲು, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, 4.9 ಅಡಿ ಎತ್ತರದ ಅವರು ಮನೆಯಿಂದ ಹೊರಡುವಾಗ ಬುರ್ಖಾ ಮತ್ತು ಕಪ್ಪು ಬಣ್ಣದ ಕ್ಯಾಪ್ ಧರಿಸಿದ್ದರು. ಕನ್ನಡ, ತುಳು, ಬ್ಯಾರಿ ಭಾಷೆ ಬಲ್ಲವರಾಗಿದ್ದಾರೆ. ಅವರ ಪತ್ತೆಯಾದರೆ ಬೆಳ್ತಂಗಡಿ ಪೊಲೀಸ್ ಠಾಣೆ (08256-232093)ಗೆ ಅಥವಾ ದ.ಕ. ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝