ಮಂಗಳೂರು: ಮಂಗಳೂರಿನಲ್ಲಿ ನೆರೆಹಾವಳಿ ಉಂಟಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ. ಮಾರ್ಚ್‌ನಲ್ಲಿಯೇ ಹೂಳೆತ್ತುವಂತೆ ನಾನು ಹಾಗೂ ಶಾಸಕ ಭರತ್ ಶೆಟ್ಟಿ ಮನಪಾಗೆ ಪತ್ರ ಬರೆದು ಮನವಿ ಮಾಡಿದ್ದೆವು. ಆದರೆ ಸಕಾಲದಲ್ಲಿ ಹೂಳೆತ್ತ ಕಾರಣ ಮಂಗಳೂರಲ್ಲಿ ಎರಡೆರಡು ಬಾರಿ ಪ್ರಕೃತಿ ವಿಕೋಪ ಉಂಟಾಗಲು ಕಾರಣವಾಗಿದೆ. ಮಂಗಳೂರು ಮುಳುಗಡೆಯಾಗಲು ಬಿಜೆಪಿ ಕಾರಣವಲ್ಲ, ಬದಲಿಗೆ ಇಲ್ಲಿನ ಉಸ್ತುವಾರಿ ಸಚಿವರೇ ಕಾರಣ. ಯಾಕೆಂದರೆ ಫೆ.28ರ ನಂತರ ಮಹಾನಗರ ಪಾಲಿಕೆಯಲ್ಲಿ ಇದ್ದದ್ದು ಕಾಂಗ್ರೆಸ್ ಸರ್ಕಾರ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಅವರು ಮಂಗಳೂರಿನ ಮಹಾ ನಗರ ಪಾಲಿಕೆ ಮುಂಭಾಗ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಡೆಸಿದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮೂಡಾ, ವಾಲ್ಮೀಕಿ ಹಗರಣದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿರುವ ಆವಾಂತರಗಳು ಅಷ್ಟಿಷ್ಟಲ್ಲ. ಈ ಧರಣಿ ಸತ್ಯಾಗ್ರಹದಲ್ಲಿ ನಾವು 25 ವಿಚಾರಗಳನ್ನು ಸಾರ್ವಜನಿಕರ ಮುಂದೆ ಇಟ್ಟಿದ್ದೇವೆ ಎಂದರು.
ಮಂಗಳೂರು ಮುಳಗಡೆಯಾಗಲು ಬಿಜೆಪಿ ಕಾರಣ ಎಂದು ಆರೋಪಿಸಲಾಗುತ್ತಿದೆ. ಆದರೆ ಫೆಬ್ರವರಿ 28ರ ನಂತರ ಅಂದರೆ ಮಾ.1ರಿಂದ ಮನಪಾದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಮನಪಾ ಅಧಿಕಾರಿಗಳು ಕಾಂಗ್ರೆಸ್ ಪರವಾಗಿ ಕೆಲಸ ಮಾಡ್ತಾ ಇದ್ದಾರೆ. ನಾನು ಹಾಗೂ ಶಾಸಕ ಭರತ್ ಶೆಟ್ಟಿ ಮಾರ್ಚ್‌ನಲ್ಲಿಯೇ ಹೂಳೆತ್ತುವಂತೆ ಮನಪಾ ಕಮಿಷನರ್‌ಗೆ ಪತ್ರ ಬರೆದಿದ್ದೆವು. ಬಿಜೆಪಿ ಅಧಿಕಾರದಲ್ಲಿದ್ದಾಗ ಮಾರ್ಚ್‌ನಲ್ಲಿಯೇ ಹೂಳೆತ್ತುವ ಕೆಲಸ ಮಾಡಲಾಗುತ್ತಿತ್ತು. ಬಿಜೆಪಿ ಇದ್ದಾಗ ಮಂಗಳೂರಿನಲ್ಲಿ ನೆರೆ ಬಂದಿದ್ದನ್ನು ತೋರಿಸಿ. ಆದರೆ ನೀವು ಮೇ ತಿಂಗಳಲ್ಲಿ ಹೂಳೆತ್ತಲಾರಂಭಿಸಿದಿರಿ. ಇಲ್ಲಿನ ಉಸ್ತುವಾರಿ ಸಚಿವರಿಗೆ ಒಂದು ಸಭೆ ನಡೆಸುವ ಯೋಗ್ಯತೆ ಇದೆಯೇ? ಹೋದ ಪುಟ್ಟ ಬಂದ ಪುಟ್ಟ ಎಂದು ವಿಮಾನದಲ್ಲಿ ಬರ್ತೀರಿ ಹೋಗ್ತೀರಿ. ನಿಮ್ಮಿಂದಾಗಿಯೇ ಮಂಗಳೂರಿನಲ್ಲಿ ನೆರೆ ಬಂದಿತು ಎಂದು ಕಾಂಗ್ರೆಸ್ ದಿನೇಶ್ ಗುಂಡೂರಾವ್ ವಿರುದ್ಧ ಹರಿಹಾಯ್ದರು.
ಮೂಡ ಕಚೇರಿಯ ಅಧ್ಯಕ್ಷ ಸದಾಶಿವ ಉಳ್ಳಾಲ ಅವರ ಪೆನ್ನನ್ನು ತೆಗೆದುಕೊಂಡು ಮೂಡ ವ್ಯಾಪ್ತಿಗೆ ಅವರಿಗೆ ಅಧಿಕಾರ ಇಲ್ಲದ ಹಾಗೆ ಮಾಡಿದ್ದೀರಿ. ಮೂಡ ಕಚೇರಿಯಲ್ಲಿ ಆಗಬೇಕಾದ ಕೆಲಸ ಬೆಂಗಳೂರಿನಲ್ಲಿ ಆಗ್ತಾ ಇದೆ. ಮೂಡ ಅಧ್ಯಕ್ಷರ ಬದಲು ಬೆಂಗಳೂರಿನಲ್ಲಿ ಮಂತ್ರಿಗಳು ಸಹಿ ಹಾಕ್ತಾ ಇದ್ದಾರೆ. ಮೂಡವನ್ನು ಎಟಿಎಂ ಕಾರ್ಡ್ ರೀತಿ ಹಣ ಹೊಡೆಸ್ಬೇಕು ಎಂದು ಅಂತ ಸಾಕಷ್ಟು ನಿಯಮಗಳನ್ನು ತಂದಿದ್ದೀರಿ. ಮೂಡ ಅಧ್ಯಕ್ಷರಿಗೆ ಮಾಡಲು ಕೆಲಸ ಇಲ್ಲ ಅಂದ್ರೆ ಅದಕ್ಕೆ ಬೀಗ ಹಾಕಿ ಎಂದು ನಾನು ಹೇಳ್ತಾ ಇಲ್ಲ, ಬದಲಿಗೆ ಜನತೆ ಹೇಳ್ತಾ ಇದ್ದಾರೆ ಎಂದು ಆರೋಪಿಸಿದರು.
ಆಶಾ ಕಾರ್ಯಕರ್ತರ ಸಂಬಳ ದ್ವಿಗುಣಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಆಶ್ವಾಸನೆಯನ್ನು ನಂಬಿ ಇಲ್ಲಿನ ಹತ್ತಿಪ್ಪತ್ತು ಆಶಾ ಕಾರ್ಯಕರ್ತರು ಮಂಗಳ ಕ್ರೀಡಾಂಗಣದಲ್ಲಿ ಅವರಿಗೆ ಶಾಲು ಪೇಟ, ತೊಟ್ಟರು. ನೀವು ತೊಟ್ಟ ಶಾಲು ಪೇಟ ವೇಸ್ಟ್ ಆಗುತ್ತೆ ಅಂತ ನಾನು ತುಳುವಲ್ಲಿ ಹೇಳಿದೆ. ಯಾಕೆಂದ್ರೆ ಸಿದ್ದರಾಮಯ್ಯಗೆ ತುಳು ಬರುವುದಿಲ್ಲ. ಆದರೆ ಆಶಾ ಕಾರ್ಯಕರ್ತರ ಸಂಬಳ ದ್ವಿಗುಣಗೊಂಡಿಲ್ಲ. ಸಿದ್ದರಾಮಯ್ಯ ಇಲ್ಲಿಗೆ ಬಂದಿದ್ದು ಪೇಟ ಶಾಲು ಕೊಂಡುಹೋಗಲು. ಇದೀಗ ಆಶಾ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಬಂದು ಕಣ್ಣೀರು ಹಾಕ್ತಾ ಇದ್ದಾರೆ. ಕಾಂಗ್ರೆಸಿಗರು 75 ವರ್ಷಗಳಿಂದ ಮಾಡಿದ್ದು ಇದ್ದನ್ನೇ ಎಂದು ಕಾಮತ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಮುಖಂಡ ವಿಕಾಸ್ ಪುತ್ತೂರು ಮಾತನಾಡಿ, ರಾಜ್ಯದಲ್ಲಿ 24 ಲಕ್ಷ ಮಂದಿಯನ್ನು ಸಂಧ್ಯಾ ಸುರಕ್ಷಾ ಯೋಜನೆಯಿಂದ ಹೊರಗಿಡಲಾಗಿದೆ. ಕಾಂಗ್ರೆರಸ್ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದು, ಅದರ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಖಂಡಿಸಬೇಕು. ಹಿಂದೂ ವಿರೋಧ ಸರ್ಕಾರ ಬಡಿದೋಡಿಸಬೇಕು. ಉಭಯ ಜಿಲ್ಲೆಗಳಲ್ಲಿ ಮರಳು, ಕೆಂಪುಕಲ್ಲು, ಇಟ್ಟಿಗೆ ಸಿಗ್ತಾ ಇಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇದಕ್ಕೂ ಅದಕ್ಕೂ ಸಂಬಂಧ ಇಲ್ಲ ಅನ್ನುವಂತೆ ಅನ್ನ ಮುಸ್ಲಿಂ ತುಷ್ಟೀಕರಣಕ್ಕಾಗಿ ಏನನ್ನು ಮಾಡಲೂ ಹೇಸುವುದಿಲ್ಲ ಎಂದು ಆರೋಪಿಸಿದರು.
ಸತ್ಯಾಗ್ರಹದ ಸಂದರ್ಭ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಪ್ರತಿಭಟನೆಯಲ್ಲಿ ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್, ಪೂರ್ಣಿಮಾ, ರಾಜುಗೋಪಾಲ ರೈ, ಸುಧೀರ್ ಘಾಟೆ ನೂರಾರು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝