ಉಡುಪಿ: ಹಣಕ್ಕಾಗಿ ಪಾಪಿ ಪುತ್ರನೋರ್ವ ತನ್ನ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೃತಪಟ್ಟವರನ್ನು ಪದ್ಮಾಬಾಯಿ(52) ಹಾಗೂ ಕೊಲೆಗೈದ ಆರೋಪಿಯನ್ನು ಪುತ್ರ ಈಶ ನಾಯ್ಕ(31) ಎಂದು ಹೆಸರಿಸಲಾಗಿದೆ.
ಜೂನ್ 18ರಂದು ರಾತ್ರಿ ಪದ್ಮಾಬಾಯಿ ಸೊಂಟನೋವಿನಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ರಾತ್ರಿ ಪದ್ಮಾಬಾಯಿ ಅವರ ತಂಗಿ ಶಿಲ್ಪಾ ಅವರಿಗೆ ಕರೆ ಮಾಡಿದ್ದ ಈಶ ನಾಯ್ಕ ತಾಯಿಗೆ ಸೌಖ್ಯವಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಕಳುಹಿಸುವಂತೆ ತಿಳಿಸಿದ್ದ. ಅದರಂತೆ ಶಿಲ್ಪಾ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದರು. ಜೂನ್ 19ರಂದು ಬೆಳಗ್ಗೆ ಶಿಲ್ಪಾರಿಗೆ ಕರೆ ಮಾಡಿದ್ದ ಈಶ ನಾಯ್ಕ ತಾಯಿ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದ ಎನ್ನಲಾಗಿದೆ.
ಶಿಲ್ಪಾ ಆಸ್ಪತ್ರೆಗೆ ಬಂದು ನೋಡಿದಾಗ ಪದ್ಮಬಾಯಿ ಅವರ ಕುತ್ತಿಗೆ ಬಳಿ ಕೆಂಪಾಗಿದ್ದು ಕುತ್ತಿಗೆಯನ್ನು ಒತ್ತಿದ ರೀತಿ ಕಂಡುಬಂದಿದೆ. ಅದರಂತೆ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಶವ ಪರೀಕ್ಷೆ ನಡೆಸಿದಾಗ ಕೊಲೆ ಮಾಡಿರುವುದಾಗಿ ದೃಢಪಟ್ಟಿದ್ದು ಮಣಿಪಾಲ ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝