‘ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’ ಉಪನ್ಯಾಸ
ಮಂಗಳೂರು: ಚಿಂತಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ. ಉಡುಪಿಯ ಕುಂದಾಪುರದ ಮೊಗವೀರ ಸಭಾಭವನದಲ್ಲಿ ಜೂನ್ 20, 21, 22 ರಂದು ನಡೆಯಲಿರುವ ‘‘ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ’’ ಉಪನ್ಯಾಸ ಕಾರ್ಯಕ್ರಮ ನಡೆಸಲು ಅನುಮತಿ ನೀಡಿರುವ ಕುಂದಾಪುರ, ಆಯೋಜಕರಿಗೆ ಷರತ್ತು ವಿಧಿಸಿದ್ದಾರೆ.
ಸೂಲಿಬೆಲೆ ಸ್ಥಾಪಿಸಿದ ಯುವ ಬ್ರಿಗೇಡ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರತಿದಿನ ಸಂಜೆ 6 ಗಂಟೆಗೆ ಚಕ್ರವರ್ತಿ ಸೂಲಿಬೆಲೆ ಅವರು ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.
ಪೊಲೀಸರ ನಡೆಗೆ ಚಿಂತಕ ಸೂಲಿಬೆಲೆ ಸಾಮಾಜಿಕ ಜಾಲತಾಣ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೊಂದು ಅಘೋಷಿತ ಗಡೀಪಾರು ಮಾಡಿಸುವ ಪ್ರಯತ್ನ ಎಂದು ಅವರು ಆರೋಪಿಸಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಎನ್ಎಸ್ಯುಐ ಪೊಲೀಸರಿಗೆ ಮನವಿ ಮಾಡಿತ್ತು. ಸೂಲಿಬೆಲೆ ಸೌಹಾರ್ದತೆ ಕೆಡಿಸುವ ದ್ವೇಷ ಭಾಷಣ ನಡೆಸುತ್ತಾರೆ ಎಂದು ಎನ್ಎಸ್ಯುಐ ಆರೋಪ ಮಾಡಿತ್ತು. ಈ ಕಾರಣಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?
ʻಇವರು ಮತ್ತೆ ವರಾತ ಶುರು ಮಾಡಿದರು. ನಾನು ಕುಂದಾಪುರಕ್ಕೆ ಹೋಗಬಾರದಂತೆ, ಅಲ್ಲಿನ ಜನರೊಡನೆ ಮಾತನಾಡಬಾರದಂತೆ. ಇದೊಂದು ಅಘೋಷಿತ ಗಡಿಪಾರು ಮಾಡಿಸುವ ಪ್ರಯತ್ನ. ಅವರ ಮಾತು ಕೇಳಿ ಪೊಲೀಸರೊಂದು ನೋಟೀಸು ಬೇರೆ ಜಾರಿ ಮಾಡಿದ್ದಾರೆ. ನನಗೇನು ಅದು ಹೊಸತಲ್ಲ. ಉದ್ರೇಕಿಸುವ ಭಾಷಣ ಮಾಡಬಾರದೆಂದು ಬಹಳ ಕಡೆಗಳಲ್ಲಿ ಕೊಟ್ಟಿದ್ದಾರೆ. ಆದರೆ ಈ ಬಾರಿ ರಾಜಕೀಯ ಮಾತನಾಡಬಾರದು ಮತ್ತು ಯಾವುದೇ ನಾಯಕರ ತೇಜೋವಧೆ ಮಾಡಬಾರದೆಂದು ಸೇರಿಸಿದ್ದಾರೆ. ಅದರರ್ಥ ನೆಹರೂ, ಇಂದಿರಾ, ರಾಜೀವ್, ಇವರ ಕುರಿತಂತೆ ಮಾತನಾಡಬಾರದು ಎಂತಲೋ ಘಜ್ನಿ, ಘೋರಿ, ಔರಂಗಜೇಬರಂತಹ ಕ್ರೂರಿಗಳ ತೇಜೋವಧೆ ಮಾಡಬಾರದೆಂತಲೋ! ನನಗಂತೂ ಗೊತ್ತಾಗಿಲ್ಲ. ರಾಜಕೀಯ ಮಾತನಾಡಬಾರದೆನ್ನುವುದು ಕರ್ನಾಟಕದಲ್ಲಿ ಎಂದಿನಿಂದ ಜಾರಿಯಾಯ್ತು ಎನ್ನುವುದರ ಬಗ್ಗೆ ಕೂಡ ಕುಂದಾಪುರದ ಪೊಲೀಸರು ಮಾಹಿತಿ ಕೊಟ್ಟರೆ ಒಳ್ಳೆಯದ್ದು.
Freedom of Expression ಹೋರಾಟಗಾರರು ಇವರ ಅಡ್ಡಾಗಳಲ್ಲೇ ಬೆಳೆದು ಬಂದವರು. ಅವರೇ ಇದಕ್ಕೊಂದು ಪರಿಹಾರ ಹೇಳಬೇಕು.
ಅಂದಹಾಗೆ, ಉಪನ್ಯಾಸ ನಾಳೆಯಿಂದಲೇ ಆರಂಭ. ನನ್ನನ್ನು ಕುಂದಾಪುರಕ್ಕೆ ಬರದಂತೆ ತಡೆಗಟ್ಟಿದವರು ದಯಾಮಡಿ ಬನ್ನಿ. ಭಾರತದ ಇತಿಹಾಸ, ವರ್ತಮಾನವನ್ನು ಅರಿತರೆ ನೀವೂ ಸಮರ್ಥ ನಾಯಕನನ್ನು ಗುರುತಿಸಿಕೊಳ್ಳಬಹುದು.ʼ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.