ತುಳುನಾಡಿನ ಕೋಮು ಸಂಘರ್ಷ ನಿಗ್ರಹಕ್ಕಾಗಿ ವಿಶೇಷ ಕಾರ್ಯಪಡೆ ಘಟಕ ಆರಂಭ

ಮಂಗಳೂರು: ತುಳುನಾಡಿನಲ್ಲಿ ಕೋಮು ಸಂಘರ್ಷ ನಿಗ್ರಹಕ್ಕಾಗಿ ರಾಜ್ಯ ಸರಕಾರ ರೂಪಿಸಿರುವ ವಿಶೇಷ ಕಾರ್ಯಪಡೆ ಘಟಕವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಇಂದು ಉದ್ಘಾಟಿಸಿದರು.


ವಿಶೇಷ ಕಾರ್ಯಪಡೆಯಲ್ಲಿ ಒಟ್ಟು 248 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇವು ಮೂರು ವಿಭಾಗಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೋಮು ನಿಗ್ರಹ ದಳ ರಚಿಸುವುದಾಗಿ ಈ ಹಿಂದೆಯೇ ಗೃಹ ಸಚಿವ ಪರಮೇಶ್ವರ್‌ ಹೇಳಿದ್ದರು. ಆದರೆ ಅದು ಕೆಲವು ಕಾಲ ನೆನೆಗುದಿಗೆ ಬಿದ್ದಿತ್ತು. ಆದರೆ ಜಿಲ್ಲೆಯಲ್ಲಿ ಸರಣಿ ಹತ್ಯೆ ನಡೆದ ಬಳಿಕ ಈ ಪ್ರಕ್ರಿಯೆ ವೇಗ ಪಡೆದುಕೊಂಡು ಇದೀಗ ಕೊನೆಗೂ ಉದ್ಘಾಟನೆಗೊಂಡಿದೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ ಬಳಿಯ ಗೆಸ್ಟ್ ಹೌಸ್ ಕಟ್ಟಡದಲ್ಲಿ ವಿಶೇಷ ಕಾರ್ಯಪಡೆ ಕಚೇರಿ ಕಾರ್ಯಾಚರಣೆ ನಡೆಸಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ್ ಭಂಡಾರಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಎ.ಸಲೀಂ, ಅಪರ ಪೊಲೀಸ್ ಮಹಾ ನಿರ್ದೇಶಕ ಎಸ್.ಮುರುಗನ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿಶೇಷ ಕಾರ್ಯಪಡೆ ಘಟಕದ ಡಿಐಜಿಪಿ ಆಗಿರುವ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!