ನಿಷ್ಠಾವಂತ ಅಧಿಕಾರಿ ದಯಾನಂದ್ ಅಮಾನತು: ಜಾಲತಾಣದಲ್ಲಿ ಆಕ್ರೋಶ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿದಂತೆ ಆರು ಮಂದಿ ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಆದರೆ ಸರ್ಕಾರದ ಈ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧವೂ ವ್ಯಕ್ತವಾಗುತ್ತಿದೆ. ಪೊಲೀಸರನ್ನೇ ಹರಕೆಯ ಕುರಿಯಾಗಿಸಿದ ರಾಜ್ಯ ಸರ್ಕಾರ ಎಂಬ ಆಕ್ರೋಶ ಕೇಳಿಬರುತ್ತಿದೆ . ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ ರಾವ್ ಕೂಡ, ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಬಲಿ ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿದ್ದಕ್ಕೆ ಸರ್ಕಾರದ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಕೊಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರ ಬೆಂಬಲಕ್ಕೆ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಿಂತಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಮಾನತು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಕರಾಳ ದಿನ ಎಂದು ಬರೆದಿದ್ದಾರೆ.

“ಸಿದ್ದರಾಮಯ್ಯ ಪ್ಯಾನಿಕ್ ಮೋಡ್‌ಗೆ ಹೋಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಮಾನತು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಕರಾಳ ದಿನ. ಸತ್ಯವನ್ನು ಹೇಳಿದ್ದಕ್ಕಾಗಿ ಬಹುಮಾನ ಮತ್ತು ಅವರು ಮತ್ತು ಅವರ ತಂಡ ಬೆಂಗಳೂರನ್ನು ಸುರಕ್ಷಿತವಾಗಿಡಲು ಇಡೀ ರಾತ್ರಿ ಕೆಲಸ ಮಾಡಿದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಡೆತ್‌ ಮಾರ್ಚ್‌ಗೆ ಕಾರಣಕರ್ತ ಎಂಬುದು ಕರ್ನಾಟಕದ ಎಲ್ಲರಿಗೂ ಗೊತ್ತು. ಯಾವ ಮುಖ್ಯಮಂತ್ರಿಯೂ ಅಸಹಾಯಕ, ಹೇಡಿ, ನರ ಮತ್ತು ಭಯಭೀತರಾಗಿಲ್ಲ. ಸರ್ಕಾರದ ಕೈ ರಕ್ತಮಯವಾಗಿದೆ” ಎಂದು ಕಿಡಿಕಾರಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷ ನಾಯಕರ ಕೊಠಡಿ ಸಂಖ್ಯೆ 160ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ  , ಎಫ್‍ಐಆರ್‌ನಲ್ಲಿ ಕೆಎಸ್‍ಸಿಎ, ಆರ್.ಸಿ.ಬಿ, ಮತ್ತು ಏಜೆನ್ಸಿಯಾದ ಡಿ.ಎನ್.ಎಯನ್ನು ಆರೋಪಿಗಳಾಗಿ ಹೆಸರಿಸಿದ್ದಾರೆ. ಸ್ವತಃ ಮುಖ್ಯಮಂತ್ರಗಳೇ ಆರೋಪಿ ನಂಬರ್ 1, ಉಪ ಮುಖ್ಯಮಂತ್ರಿಗಳು ಆರೋಪಿ ನಂಬರ್ 2, ಮಾನ್ಯ ಗೃಹ ಸಚಿವ ಪರಮೇಶ್ವರ್ ಅವರು ಆರೋಪಿ ನಂಬರ್ 3 ಎಂದು ವಾಗ್ದಾಳಿ ಕೂಡ ನಡೆಸಿದ್ದಾರೆ.

ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡುವ ಬದಲಾಗಿ ತಾವೇ ಜವಾಬ್ದಾರಿ, ನೈತಿಕ ಹೊಣೆ ಹೊತ್ತು ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ ಎಂದು ಮತ್ತೊಮ್ಮೆ ಒತ್ತಾಯಿಸಿದರು.

ಬಿ ದಯಾನಂದ್ – ಬೆಂಗಳೂರು ನಗರ ಪೊಲೀಸ್ ಆಯುಕ್ತ, ವಿಕಾಸ್ ಕುಮಾರ್ – ಹೆಚ್ಚುವರಿ ಪೊಲೀಸ್ ಆಯುಕ್ತ, ಎಚ್‌ ಟಿ ಶೇಖರ್ – ಕೇಂದ್ರ ವಿಭಾಗದ ಡಿಸಿಪಿ, ಸಿ. ಬಾಲಕೃಷ್ಣ – ಕಬ್ಬನ್ ಪಾರ್ಕ್ ಎಸಿಪಿ, ಎಕೆ ಗಿರೀಶ್ – ಕಬ್ಬನ್ ಪಾರ್ಕ್ ಪೊಲೀಸ್ ಇನ್ ಸ್ಪೆಕ್ಟರ್ ಅವರನ್ನು ರಾಜ್ಯ ಸರ್ಕಾರ ಯಾವುದೇ ಮುಲಾಜಿಲ್ಲದೆ ಅಮಾನತು ಮಾಡಿದ್ದು ಒಟ್ಟು ಘಟನೆಗೆ ಪೊಲೀಸರೇ ಕಾರಣ ಎನ್ನುವಂತೆ ದೂಷಣೆ ಮಾಡಲಾರಂಭಿಸಿದೆ. ನಿಷ್ಠಾವಂತ ಐಪಿಎಸ್ ಅಧಿಕಾರಿಯೆಂದು ಇಲಾಖೆಯಲ್ಲಿ ಹೆಸರು ಮಾಡಿದ್ದ ದಯಾನಂದ್ ಅವರನ್ನು ಸಸ್ಪೆಂಡ್ ಮಾಡಿದ್ದಕ್ಕೆ ಇಲಾಖೆ ಒಳಗಡೆಯೇ ಅಸಮಾಧಾನ ವ್ಯಕ್ತವಾಗಿದೆ.

error: Content is protected !!