ಅಬ್ದುಲ್‌ ರಹ್ಮಾನ್‌ ಹತ್ಯೆ ಪ್ರಕರಣ: ಮೃತದೇಹ ಸಾಗಾಟದ ವೇಳೆ ಭುಗಿಲೆದ್ದ ಆಕ್ರೋಶ: ಫರಂಗಿಪೇಟೆಯಲ್ಲಿ ರಸ್ತೆ ತಡೆ

ಮಂಗಳೂರು: ಬಂಟ್ವಾಳದ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಅಬ್ದುಲ್ ರಹ್ಮಾನ್ (34) ಕೊಲೆ ಪ್ರಕರಣಕ್ಕೆ ಜಿಲ್ಲೆಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೊಲೆ ಖಂಡಿಸಿ ಬಂಟ್ವಾಳ ವ್ಯಾಪ್ತಿಯ ಬಿ.ಸಿ.ರೋಡ್‌ ಪೊಳಲಿ, ಅಡ್ಡೂರು, ಫರಂಗಿಪೇಟೆ, ತುಂಬೆ ಸುತ್ತ ಮುತ್ತ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಸ್ವಯಂಘೋಷಿತ ಬಂದ್‌ ಆಗಿದೆ. ಇಂದು ಮುಂಜಾನೆ ರಹ್ಮಾನ್‌ ಪಾರ್ಥೀವ ಶರೀರ ಸಾಗಾಟದ ಸಂದರ್ಭ ಫರಂಗಿಪೇಟೆಯಲ್ಲಿ ಜಮಾಯಿಸಿದ ಗುಂಪು ಆಕ್ರೋಶ ವ್ಯಕ್ತಪಡಿಸಿದೆ.

ದೇರಳಕಟ್ಟೆ ಯೆನೆಪೊಯ ಆಸ್ಪತ್ರೆಯಲ್ಲಿ ರಹ್ಮಾನ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ಅಲ್ಲಿಗೂ ಜಮಾಯಿಸಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರು ಆಕ್ರೋಶಿತರನ್ನು ಸಮಾಧಾನಪಡಿಸಿ ಇಂದು ಬೆಳಿಗ್ಗೆ ಮೃತದೇಹವನ್ನು ಆಸ್ಪತ್ರೆಯವರು ಮನೆಯವರಿಗೆ ಬಿಟ್ಟುಕೊಟ್ಟಿದ್ದಾರೆ. ಅಂಬ್ಯುಲೆನ್ಸ್‌ ಮೂಲಕ ಮೃತದೇಹವನ್ನು ಪಡೀಲ್‌ ರಸ್ತೆಯ ಮೂಲಕ ಸಾಗಿಸಲಾಗಿದ್ದು, ನೂರಾರು ಮಂದಿ ಭಾಗಿಯಾಗಿದ್ದರು.

ಪೊಲೀಸರು ಬಿಗುಬಂದೋಬಸ್ತ್‌ ನೀಡಿದ್ದು, ಇಂದು ಮುಂಜಾನೆ ಕುತ್ತಾರ್ ಮದನಿ ನಗರದ ಮಸೀದಿಗೆ ಸಾಗಿಸಿ ಅಲ್ಲಿ ಮಯ್ಯತ್ ಸ್ನಾನ ನಿರ್ವಹಿಸಲಾಯಿತು. ಮಯ್ಯತ್ ನಮಾಝ್ ಬಳಿಕ ಅಲ್ಲಿಂದ ಅಲ್ಲಿಂದ ಮತ್ತೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬಂಟ್ವಾಳ ತಾಲೂಕಿನ ಕೊಳತ್ತಮಜಲಿನಲ್ಲಿರುವ ಮನೆಗೆ ಕೊಂಡೊಯ್ಯಲಾಯಿತು.

ಕೃತ್ಯವನ್ನು ಖಂಡಿಸಿ ಫರಂಗಿಪೇಟೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರ ಗುಂಪು ರಸ್ತೆ ತಡೆ ನಡೆಸಿ ಹತ್ಯೆಯನ್ನು ಖಂಡಿಸಿ, ಹಂತಕರಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ಆಗ್ರಹಿಸಿದ್ದಾರೆ.

ನಿನ್ನೆ ಮಧ್ಯಾಹ್ನ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಪಿಕಪ್ ವಾಹನದಲ್ಲಿ ಮರಳು ಅನ್‌ಲೋಡ್‌ ಮಾಡುತ್ತಿದ್ದ ವೇಳೆ ಅಬ್ದುಲ್ ರಹ್ಮಾನ್ ಮತ್ತು ಕಲಂದರ್ ಶಾಫಿ ಎಂಬವರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ಮಾರಣಾಂತಿಕ ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಹ್ಮಾನ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಹಲ್ಲೆಗೊಳಗಾದ ಕಲಂದರ್ ಶಾಫಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಂದರ್‌ ಶಾಫಿ ನೀಡಿದ ಮಾಹಿತಿ ಆಧಾರದಲ್ಲಿ ಸ್ಥಳೀಯರಾದ ದೀಪಕ್, ಸಮೀತ್ ಎಂಬ ಇಬ್ಬರು ಸೇರಿ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಎನ್ಎಸ್ 163ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿನ್ನೆಯಿಂದ ಮೇ 30ರವರೆಗೆ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಾಲ್ ಆದೇಶ ಹೊರಡಿಸಿದ್ದಾರೆ.   ಇವತ್ತು ಮಂಗಳೂರಿಗೆ ಎಡಿಜಿಪಿ ಹಿತೇಂದ್ರ ಭೇಟಿ ನೀಡಲಿದ್ದು, ಆಯಕಟ್ಟಿನ ಸ್ಥಳಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜೊತೆಗೆ ಅನುಮಾನಾಸ್ಪದ ಚಟುವಟಿಕೆ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

error: Content is protected !!