ಮಂಗಳೂರು: ರಾಜ್ಯದಲ್ಲಿ ವರ್ಷಧಾರೆ ಆರಂಭವಾಗಿದ್ದು ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅವಧಿಗೂ ಮುನ್ನವೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು ಎಲ್ಲೆಡೆ ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದ್ದು ಅಣೆಕಟ್ಟು, ಕೆರೆಕಟ್ಟೆಗಳು ಭರ್ತಿಯಾಗುತ್ತಿರುವುದು ಸಂತಸ ಮೂಡಿಸಿದರೆ ಭಾರಿ ಮಳೆಯಿಂದ ಕೆಲವೆಡೆ ಅನಾಹುತಗಳು ಸಂಭವಿಸುತ್ತಿರುವುದು ಆತಂಕಕ್ಕೀಡುಮಾಡಿದೆ. ಮುಂದಿನ ಒಂದು ವಾರ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ವಿಧಾನ ಪರಿಷತ್ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ನೈರುತ್ಯ ಮುಂಗಾರು ಕರಾವಳಿ ಭಾಗದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ 24 ಗಂಟೆಯಲ್ಲಿ 70 ಮಿ.ಮೀ. ಮಳೆಯಾಗಿದ್ದು ಸಾಕಷ್ಟು ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವೆಡೆ ರಸ್ತೆ ಸಂಪರ್ಕ ಕಡಿತವಾಗಿದೆ. ಮನೆಗಳು ಸೇರಿದಂತೆ ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗಿದ್ದು ಜಿಲ್ಲಾಡಳಿತ ತುರ್ತುಕ್ರಮ ಕೈಗೊಳ್ಳಬೇಕಿದೆ. ಮಂಗಳೂರು, ಉಡುಪಿ ಸೇರಿದಂತೆ ರೆಡ್ ಅಲರ್ಟ್ ಘೋಷಣೆಯಾಗಿರುವ ಜಿಲ್ಲೆಗಳು ಆಗಿರುವುದರಿಂದ ಪ್ರವಾಸಿಗರ ಬಗ್ಗೆ ವಿಶೇಷ ಕಾಳಜಿ ವಹಿಸುವುದರ ಜೊತೆಗೆ ಕಡಲತೀರದಲ್ಲಿ ನೆಲೆಸಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ಆಗಬೇಕಿದೆ. ಮಳೆಯಿಂದ ಮನೆ ಹಾನಿಯಾದವರ ವಾಸಕ್ಕಾಗಿ ಪುನರ್ವಸತಿ ಕೇಂದ್ರಗಳನ್ನು ತೆರೆಯಬೇಕಿದೆ. ಸಹಾಯವಾಣಿ ಕೇಂದ್ರ ಆರಂಭಿಸಿ ಸಾರ್ವಜನಿಕರ ನೆರವಿಗೆ ಧಾವಿಸಬೇಕಿದೆ.
ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಸೇರಿದಂತೆ ಗುಡ್ಡಗಾಡಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತವಾಗುತ್ತಿದೆ. ರಸ್ತೆ ಸಂಪರ್ಕ ಕಡಿತವಾಗಿದ್ದು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತುರ್ತು ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ. ಹೆದ್ದಾರಿಗಳಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸುವುದರ ಜೊತೆಗೆ ಸಾರ್ವಜನಿಕರಿಗೆ ಸಮಸ್ಯೆ ಮತ್ತು ಸವಾಲುಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕಿದೆ.
ಮೀನುಗಾರರ ಬದುಕನ್ನು ರಕ್ಷಿಸುವ ನಿಟ್ಟಿನಲ್ಲಿ ನದಿ ಪಾತ್ರಗಳಲ್ಲಿ ಹೊಳೆ, ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಲ್ಲದೆ ಅವರ ಸುರಕ್ಷತೆ ಕುರಿತು ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಪಡೆ ವಿಶೇಷ ನಿಗಾ ಇರಿಸಬೇಕು.
ಶಾಲಾ ಮಕ್ಕಳಿಗೆ ಇನ್ನು ಕೆಲವೇ ದಿನಗಳಲ್ಲಿ ಶಾಲೆ ಪ್ರಾರಂಭವಾಗಲಿದ್ದು ಸರಕಾರಿ ಶಾಲೆ ಕಟ್ಟಡ, ಶಾಲಾ ತರಗತಿಗಳು ಸುಸ್ಥಿತಿಯಲ್ಲಿದೆಯೇ ಎಂಬ ಬಗ್ಗೆ ಸ್ಥಳೀಯ ಆಡಳಿತ ಪರಾಮರ್ಶೆ ನಡೆಸಬೇಕು ಮತ್ತು ಜೋರಾಗಿ ಮಳೆ ಬರುವ ಸಂದರ್ಭದಲ್ಲಿ ಮಕ್ಕಳ ರಕ್ಷಣೆ ಕುರಿತು ಎಚ್ಚರ ವಹಿಸಬೇಕು.
ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ತಡೆಗೆ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಅಗತ್ಯ ನೆರವಿಗಾಗಿ ವಿಪತ್ತು ನಿರ್ವಹಣಾ ದಳಗಳ ಜೊತೆಗೆ ಪೊಲೀಸ್, ಹೋಮ್ ಗಾರ್ಡ್ ಸೇರಿದಂತೆ ಸ್ವಯಂ ಸೇವಕರನ್ನು ಬಳಸಿಕೊಂಡು ಸಾರ್ವಜನಿಕರ ರಕ್ಷಣೆಗೆ ನೆರವಾಗಬೇಕಿದೆ. ಪ್ರಾಕೃತಿಕ ದುರಂತಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಜನ ಜಾನುವಾರುಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆದೇಶಿಸಬೇಕಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟು ಪರಿಸ್ಥಿತಿ ನಿಭಾಯಿಸುವಂತೆ ಮುಖಾಂತರ ಪ್ರಾಣಹಾನಿ ತಡೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸ್ಪಷ್ಟ ಸೂಚನೆ ನೀಡಬೇಕೆಂದು ಈ ಮೂಲಕ ಕೋರಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಅಗತ್ಯವಿರುವ ಅನುದಾನವನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಿ ತುರ್ತು ಅವಶ್ಯಕತೆಗಾಗಿ ಸ್ಥಳೀಯ ಸಂಸ್ಥೆಗಳ ಖಾತೆಗಳಿಗೂ ಜಮೆ ಮಾಡಲು ಸೂಚನೆ ನೀಡುವಂತೆ ಈ ಮೂಲಕ ತಮ್ಮನ್ನು ಕೋರಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.