ಆಸ್ತಿ ತೆರಿಗೆ ರಿಯಾಯಿತಿಯಲ್ಲಿ ವಂಚನೆ: ಶಾಸಕ ಕಾಮತ್ ಆಕ್ಷೇಪ!

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ಆದೇಶದಿಂದ ಸಾವಿರಾರು ಜನರು ಆಸ್ತಿ ತೆರಿಗೆ ಪಾವತಿಸುವಾಗ ಶೇ.5ರಷ್ಟು ರಿಯಾಯಿತಿಯಿಂದ ವಂಚಿತರಾಗಿರುವ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮ.ನ.ಪಾ ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತೀ ಆರ್ಥಿಕ ವರ್ಷದ ಆರಂಭದಿಂದ ಅಂದರೆ ಏಪ್ರಿಲ್ 30 ರವರೆಗೆ ಆಸ್ತಿ ತೆರಿಗೆ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು ಅದರನ್ವಯ ಅನೇಕರು ರಿಯಾಯಿತಿ ಸೌಲಭ್ಯ ಪಡೆದಿದ್ದಾರೆ. ಆದರೆ ರಾಜ್ಯ ಸರ್ಕಾರವು ಮೇ 9 ರಂದು ಆದೇಶವೊಂದನ್ನು ಹೊರಡಿಸಿ ಜೂನ್ ಅಂತ್ಯದ ವರೆಗೆ 2025-26ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ರಿಯಾಯಿತಿಯ ಕಾಲಾವಧಿಯನ್ನು ವಿಸ್ತರಿಸಿದ್ದು ಮನಪಾ ವ್ಯಾಪ್ತಿಯಲ್ಲಿ ಮೇ 11 ರಿಂದ ಅನ್ವಯವಾಗಿದೆ. ಹೀಗಿರುವಾಗ ಮೇ 1 ರಿಂದ 11 ರ ವರೆಗೆ ಮ.ನ.ಪಾ ವ್ಯಾಪ್ತಿಯಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿಯಿಂದ ಶೇ.5 ರಷ್ಟು ರಿಯಾಯಿತಿ ನೀಡದೇ ಆಸ್ತಿ ತೆರಿಗೆ ವಸೂಲು ಮಾಡಲಾಗಿದ್ದು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದವರು ರಿಯಾಯಿತಿ ಸೌಲಭ್ಯದಿಂದ ವಂಚಿತವಾದಂತಾಗಿದೆ. ಈ ಬಗ್ಗೆ ಜನಸಾಮಾನ್ಯರಿಂದ ದೂರುಗಳು ಸಹ ಬರುತ್ತಿವೆ ಎಂದು ದೂರಿದ್ದಾರೆ.
ಕೂಡಲೇ ಐದು ಸಾವಿರಕ್ಕೂ ಅಧಿಕ ಮಂದಿಯಿಂದ ಸಂಗ್ರಹಿಸಲಾಗಿರುವ ಹೆಚ್ಚುವರಿ ತೆರಿಗೆಯನ್ನು ಹಿಂತಿರುಗಿಸಬೇಕು ಇಲ್ಲವೇ ಮುಂದಿನ ಆರ್ಥಿಕ ವರ್ಷದ ಆಸ್ತಿ ತೆರಿಗೆಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಶಾಸಕ ಕಾಮತ್ ಆಗ್ರಹಿಸಿದ್ದಾರೆ.

error: Content is protected !!