ಮಂಗಳೂರು: ಕರಾವಳಿ ಪ್ರದೇಶದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆಯು ಮೇ 24ರಿಂದ 30ರ ವರೆಗೆ ರೆಡ್ ಅಲರ್ಟ್ ಘೋಷಿಸಿದೆ.
ದ.ಕ.ಜಿಲ್ಲೆಯ ಬಹುತೇಕ ಕಡೆ ಶುಕ್ರವಾರ ಮುಂಗಾರು ಪ್ರವೇಶದ ಮುನ್ನವೇ ಭಾರೀ ಮಳೆಯಾಗಿದ್ದು, ಕೆಲವು ಕಡೆ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ. ಬೆಳಗ್ಗಿನಿಂದಲೇ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆ ಸುರಿದಿದೆ. ಮಧ್ಯಾಹ್ನ ಮತ್ತು ಸಂಜೆಯ ವೇಳೆಗೆ ಮಳೆ ಬಿರುಸು ಪಡೆದಿದ್ದು, ರಾತ್ರಿ ವೇಳೆ ಇನ್ನಷ್ಟು ಮಳೆಯಾಗುವ ಸಾಧ್ಯತೆ ಇದೆ. ಅದೇ ರೀತಿ ಉಡುಪಿ, ಉತ್ತರ ಕನ್ನಡದಲ್ಲಿಯೂ ಜಾಸ್ತಿ ಮಳೆಯಾಗಿರುವುದರಿಂದ ಈ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.