ಮಂಗಳೂರು: ಲಿಂಗಾಯತ ಸಮುದಾಯದ ಭಾಗವಾಗಿರುವ ಬೇಡರ ಜಂಗಮ ಸಮುದಾಯವು, ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು, ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ 17% ಮೀಸಲಾತಿಯನ್ನು ಕೊಳ್ಳೆಹೊಡೆಯಲು ಯತ್ನಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು ಆರೋಪಿಸಿದ್ದಾರೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಡಾ.ಬಿ.ಆರ್.ಅಂಬೇಡ್ಕರ್ ರಚಿತವಾದ ಭಾರತದ ಸಂವಿಧಾನದ ಆಶಯದಂತೆ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಇಚ್ಛಿಸಿದ್ದು, ಇದು ಇನ್ನೂ ಅತೀ ತಳಮಟ್ಟದಲ್ಲಿರುವ ಪರಿಶಿಷ್ಟರನ್ನು ಹುಡುಕಿ, ಅವರ ಕಲ್ಯಾಣಕ್ಕೆ ಪೂರಕವಾಗಿ ಮೀಸಲಾತಿಯನ್ನು ವರ್ಗಿಕರಿಸಲು ಒಳ ಮೀಸಲಾತಿ ಜಾರಿಗೆ ಕಾರ್ಯಾರಂಭಿಸಿದ್ದು ಶ್ಲಾಘನೀಯ. ಅದಕ್ಕೆ ಪೂರಕವಾಗಿ ಗೌರವಾನ್ವಿತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿ, ಹಿಂದಿನ ಅಯೋಗದಲ್ಲಾದ ಲೋಪಗಳನ್ನು ಸರಿಪಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಜಾತಿ ಸಮೀಕ್ಷೆಯನ್ನು ನಡೆಸಿ, ಅದರ ದತ್ತಾಂಶಗಳ ಆಧಾರದ ಮೇಲೆ ಮೀಸಲಾತಿಯ ವರ್ಗಿಕರಣ ಮಾಡಲು ಇಚ್ಚಿಸಿದ್ದಾರೆ ಎಂದರು.
ಮುಂದುವರಿದು ಮಾತನಾಡಿದ ಅವರು, ಲಿಂಗಾಯತ ಸಮುದಾಯದ ಭಾಗವಾಗಿರುವ ಬೇಡರ ಜಂಗಮ ಸಮುದಾಯವು, ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು, ಪರಿಶಿಷ್ಟ ಜಾತಿಗಳಿಗೆ ಮೀಸಲಿಟ್ಟ 17% ಮೀಸಲಾತಿಯನ್ನು ಕೊಳ್ಳೆಹೊಡೆಯಲು ಯತ್ನಿಸುತ್ತಿದ್ದು, ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕವು ಖಂಡಿಸುತ್ತದೆ. ಮಾತ್ರವಲ್ಲದೇ ಕೆಲವು ಭ್ರಷ್ಟಅಧಿಕಾರಿಗಳ ಲಂಚದ ಲಾಲಸೆಯಿಂದ ಇಂತಹ ನಕಲಿ ಜಾತಿ ಪ್ರಮಾಣಪತ್ರಗಳು ಅವರಿಗೆ ಲಭಿಸಿದ್ದು ಈ ಬಗ್ಗೆ ಮಾನ್ಯ ಆಯೋಗ ಮತ್ತು ಮಾನ್ಯ ಮುಖ್ಯಮಂತ್ರಿಗಳು ಇಂತಹ ನಕಲಿ ಜಾತಿ ಪ್ರಮಾಣಪತ್ರಗಳನ್ನು ಅಮಾನ್ಯಗೊಳಿಸಿ, ಈ ನಕಲಿ ಮಾಫಿಯದ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸುವ ಮೂಲಕ ರಾಜ್ಯವನ್ನು ನಕಲಿ ಪ್ರಮಾಣಪತ್ರಗಳಿಂದ ಮುಕ್ತಗೊಳಿಸಿ, ಭಾರತದ ಸಂವಿಧಾನದ ಆಶಯದಂತೆ ನಿಜವಾದ ದಲಿತ ವರ್ಗಗಳಿಗೆ ಮೀಸಲಾತಿಯವಿಪ್ರಯೋಜನ ದೊರಕುವಂತೆ ಮಾಡಬೇಕೆಂದು ದಿನೇಶ್ ಮೂಳೂರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಟಿ. ಹೊನ್ನಯ್ಯ, ಗಣೇಶ್ ಪ್ರಸಾದ್ ಮೂಡಬಿದ್ರೆ, ಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು