“ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ರಾಜೀವ್ ಗಾಂಧಿ“ -ರಮಾನಾಥ್ ರೈ

ಮಂಗಳೂರು: ಪ್ರಗತಿಗಾಮಿ ಆಲೋಚನೆ, ದೂರಗಾಮಿ ಯೋಜನೆ ಮತ್ತು ಜನಪರ ಚಿಂತನೆಯ ಮೂಲಕ ರಾಜೀವ್ ಗಾಂಧಿ ಅವರು ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜಿಸಿದ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 34ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಬಳಿಕ ಅವರು ಮಾತನಾಡುತ್ತಿದ್ದರು.

21ನೇ ಶತಮಾನಕ್ಕೆ ದೇಶವನ್ನು ಸಜ್ಜುಗೊಳಿಸುವಲ್ಲಿ ರಾಜೀವ್‌ ಗಾಂಧಿ ಕೊಡುಗೆ ಅಪಾರ. ಅವರು ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಸಾಕ್ಷರತಾ ಮಿಷನ್ ಪ್ರಾರಂಭಿಸಿದರು. ಶಾನ್ ಪಿತ್ರೋಡಾ ಅವರ ಮೂಲಕ ತಂತ್ರಜ್ಞಾನ ಯೋಜನೆಗಳನ್ನು ದೇಶದಲ್ಲಿ ಯಥಾವತ್ತಾಗಿ ಜಾರಿಗೊಳಿಸಿದರು. ಭಾರತದ ಗ್ರಾಮೀಣ ಪ್ರದೇಶಗಳನ್ನು ಹೊರಗಿನ ಜಗತ್ತಿನ ಜೊತೆ ಸಂಪರ್ಕಿಸಿದ ಪಿಸಿಒ ಕ್ರಾಂತಿ ರಾಜೀವ್ ಕನಸಿನ ಕೂಸಾಗಿದ್ದು, ಅವರು ಡಿಜಿಟಲ್ ಇಂಡಿಯಾದ ಶಿಲ್ಪಿ ಎಂದು ಬಣ್ಣಿಸಿದರು.

ರಾಜೀವ್ ಗಾಂಧಿ 18 ವರ್ಷ ಮೇಲ್ಪಟ್ಟವರಿಗೆ ಮತದಾನ ಮಾಡುವ ಹಕ್ಕು ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಿದರು. ಯುವಕರು, ದಲಿತರು, ಹಿಂದುಳಿದವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರದ ಗದ್ದುಗೆ ಲಭ್ಯವಾಗಿದ್ದರೆ ಅದಕ್ಕೆ ರಾಜೀವ್ ಗಾಂಧಿ ಕಾರಣ. ಸೈದ್ಧಾಂತಿಕ ಬದ್ಧತೆ, ಪ್ರಯೋಗಶೀಲ ಮನಸ್ಸು ಮತ್ತು ದೂರದೃಷ್ಟಿ, ಉತ್ತಮ ಆಡಳಿತದಿಂದ ರಾಷ್ಟ್ರದ ಗೌರವ ಹೆಚ್ಚಿದೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿದರು. ಬ್ಲಾಕ್ ಅಧ್ಯಕ್ಷರಾದ ಚಂದ್ರಶೇಖರ್ ಭಂಡಾರಿ, ಜೆ.ಅಬ್ದುಲ್ ಸಲೀಂ, ಕೆಪಿಸಿಸಿ ಸದಸ್ಯರಾದ ಪಿಯೂಸ್ ರೋಡ್ರಿಗಾಸ್, ಕೆ.ಅಪ್ಪಿ, ಡಿಸಿಸಿ ಉಪಾಧ್ಯಕ್ಷ ಶುಭೋದಯ ಆಳ್ವ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಸುಭಾಷ್ ಶೆಟ್ಟಿ ಕೊಲ್ನಾಡ್, ದಿನೇಶ್ ಮುಳೂರು, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಮಲಾರ್ ಮೋನು, ಮುಖಂಡರಾದ ಕೆ.ಪಿ ಥೋಮಸ್, ಟಿ.ಹೊನ್ನಯ್ಯ, ನವೀನ್ ಡಿಸೋಜ, ಅಶೋಕ್ ಡಿ.ಕೆ,ನಝೀರ್ ಬಜಾಲ್, ಅಶ್ರಫ್ ಬಜಾಲ್, ಹಯಾತುಲ್ಲಾ ಖಾಮಿಲ್, ನೀರಜ್ ಚಂದ್ರಪಾಲ್, ಲಕ್ಷ್ಮೀ ನಾಯರ್, ಟಿ.ಕೆ ಸುಧೀರ್, ಗಿರೀಶ್ ಶೆಟ್ಟಿ ಕದ್ರಿ, ಶಬ್ಬೀರ್.ಎಸ್, ಸತೀಶ್ ಪೆಂಗಲ್, ಯೋಗೀಶ್ ಕುಮಾರ್, ನೆಲ್ಸನ್ ಮೊಂತೆರೋ, ಹೇಮಂತ್ ಗರೋಡಿ, ಚೇತನ್ ಕುಮಾರ್, ಜಾರ್ಜ್, ಆಲ್ವಿನ್ ಪ್ರಕಾಶ್, ಮಂಜುಳಾ ನಾಯಕ್, ವಹಾಬ್ ಕುದ್ರೋಳಿ, ರಮಾನಂದ ಪೂಜಾರಿ, ಪೃಥ್ವಿರಾಜ್ ಪೂಜಾರಿ, ಆಸಿಫ್ ಬಜಾಲ್, ಎಸ್.ಕೆ ಸೌಹಾನ್, ದೀಪಕ್ ಪೂಜಾರಿ, ಶೇಕ್ ಗುರುಪುರ, ಸಮರ್ಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್ ವಂದಿಸಿದರು.

error: Content is protected !!