ಮಂಗಳೂರು: ರಾಜಕೀಯ ದುರುದ್ದೇಶವನ್ನಿಟ್ಟುಕೊಂಡು ವಿಧವೆ ಮಹಿಳೆಯಿಂದ ಸುಳ್ಳು ದೂರು ದಾಖಲಿಸಿ ನಮ್ಮ ರಾಜಕೀಯ ಜೀವನವನ್ನೇ ಮುಗಿಸಲು ತಂಡವೊಂದು ಷಡ್ಯಂತ್ರ ನಡೆಸಿದೆ ಎಂದು ಬಂಟ್ವಾಳ ಪುರಸಭಾ ಸದಸ್ಯರುಗಳಾದ ಶರೀಫ್ ಮತ್ತು ಹಸೈನಾರ್ ಆರೋಪ ಮಾಡಿದ್ದಾರೆ.
ಬಂಟ್ವಾಳ ಠಾಣಾ ವ್ಯಾಪ್ತಿಯ ಕಾರಾಜೆ ಎಂಬಲ್ಲಿ ವಾಸವಿರುವ ಬಗ್ಗೆ ದೂರಿನಿಂದಲೇ ತಿಳಿದುಬಂದಿದೆ. ಈ ಹಿಂದೆ ಮಹಿಳೆ ದೂರು ನೀಡಲು ಠಾಣೆಗೆ ಬಂದಾಗಲೂ ಪ್ರಾಥಮಿಕ ತನಿಖೆಯಿಂದಲೇ ಸುಳ್ಳು ದೂರು ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದರು. ಅದಕ್ಕಾಗಿ ನ್ಯಾಯಾಲಯದಿಂದ ಆದೇಶ ತಂದು ಪೊಲೀಸ್ ದೂರು ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿ.ಸಿ.ರೋಡ್ ನಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರ ಮಾಲಕಿಯಾಗಿದ್ದ ಮಹಿಳೆ ಎರಡು ವರ್ಷಗಳ ಹಿಂದೆ ಜಾಗದ ಕಾಗದ ಪತ್ರ ಸರಿಪಡಿಸುವ ವಿಚಾರವಾಗಿ ಪರಿಚಯವಾಗಿದ್ದರು. ಅದರಂತೆ ಜಾಗದ ವಿಚಾರದ ಕುರಿತು ಶೇ.80 ರಷ್ಟು ದಾಖಲೆಗಳನ್ನು ಸರಿ ಮಾಡಲಾಗಿತ್ತು. ಅಷ್ಟರಲ್ಲಿ ತಗಾದೆ ತೆಗೆದ ಮಹಿಳೆ ಜಾಗದ ದಾಖಲೆಗಳ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ, ಹಣ ಪಡೆದುಕೊಂಡಿರುವ ವಿಚಾರದಲ್ಲಿ ಆರೋಪ ಮಾಡಲು ಆರಂಭಿಸಿದ್ದರು. ಆರಂಭದಲ್ಲಿ ಜಾಗದ ವಿಚಾರದ ದಾಖಲೆಗಳನ್ನು ಒದಗಿಸುವ ಸಂದರ್ಭ ಯಾವುದೇ ಸಂಬಂಧಿಕರು ಆಕೆಯ ಜತೆಯಾಗದೇ ಇದ್ದು, ಇದೀಗ ಜಾಗದ ದಾಖಲೆಗಳು ಸರಿಯಾಗುತ್ತಿದ್ದಂತೆ ಆಕೆ ಜತೆಗೆ ಸಂಬಂಧಿಕರು ಅಂಟಿಕೊಂಡಿದ್ದರು. ಅಲ್ಲದೆ ಕಳೆದ 6 ತಿಂಗಳಿನಿಂದ ಮಹಿಳೆ ಯಾವುದೇ ಮಾಹಿತಿಯನ್ನು ಪಡೆಯದೇ ಇದೀಗ ಏಕಾಏಕಿ ಸುಳ್ಳು ದೂರು ದಾಖಲಿಸಿದ್ದಾರೆ. ಬಹುತೇಕ ರಾಜಕೀಯ ಮುಖಂಡರುಗಳ ಜೊತೆಗೆ ಅನ್ಯೋನ್ಯತೆಯಿಂದ ಇರುವ ಇಬ್ಬರು ಕೌನ್ಸಿಲರ್ ಗಳಾದ ಶರೀಫ್ ಮತ್ತು ಹಸೈನಾರ್ ಅವರ ರಾಜಕೀಯ ಜೀವನ ಮುಗಿಸುವ ಉದ್ದೇಶದಿಂದ ತಂಡ ಮಹಿಳೆ ಜೊತೆಗೆ ಕೈಜೋಡಿಸಿದೆ. ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕವೂ ನಿರಂತರ ಬೆದರಿಕೆಗಳನ್ನು ಒಡ್ಡುತ್ತಲೇ ಇದ್ದು ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.