ಮೀನೇ ಇಲ್ಲ: ಕಂಡೇವು ಧರ್ಮರಸು ಉಳ್ಳಾಯ ಮೀನು ಹಿಡಿಯುವ ಜಾತ್ರೆಗೆ ಕಂಟಕ!

ಮಂಗಳೂರು: ʻಎರ್ಮಾಳು ಜಪ್ಪು ಕಂಡೇವು ಅಡೆಪುʼ ಇದು ತುಳುನಾಡಿನ ಜನಪ್ರಿಯ ಗಾದೆ ಮಾತು. ಅಂದರೆ ಎರ್ಮಾಳಿನಿಂದ ಜಾತ್ರೆಗಳು ಆರಂಭಗೊಂಡರೆ, ಈ ಖಂಡಿಗೆ ಜಾತ್ರೆಯೊಂದಿಗೆ ತುಳುನಾಡಿನಲ್ಲಿ ಜಾತ್ರೆಗಳು ಕೊನೆಗೊಳ್ಳುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಸಮೀಪದ ‘ಕಂಡೇವು’ ಎಂದು ತುಳುವಿನಲ್ಲಿ ಕರೆಯಲ್ಪಡುವ ಖಂಡಿಗೆ ಶ್ರೀಧರ್ಮ ಅರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆ ನಡೆಯುತ್ತಿದೆ. ಇದರ ನಿಮಿತ್ತ ನಂದಿನಿ ನದಿಯಲ್ಲಿ ಮೀನುಬೇಟೆ ನಡೆಯುತ್ತದೆ. ಈ ನದಿಗೆ ದೈವಸ್ಥಾನದ ಪ್ರಸಾದ ಹಾಕಿ, ಸುಡುಮದ್ದು ಬಿಟ್ಟ ನಂತರ ಭಕ್ತರೆಲ್ಲರೂ ಒಟ್ಟಿಗೆ ನದಿಗಿಳಿದು ಮೀನು ಹಿಡಿಯುತ್ತಾರೆ. ಇದೇ ಮೀನನ್ನು ಭಕ್ತರು ದೇವರ ಪ್ರಸಾದವಾಗಿ ಸೇವಿಸುತ್ತಾರೆ.

ಆದರೆ ಈ ಬಾರಿ ಮೀನುಗಳ ಅಭಾವ ಭಕ್ತರಲ್ಲಿ ನಿರಾಶೆ ಮೂಡಿಸಿದೆ.

ತುಳುವಿನ ‘ಪಗ್ಗು ಸಂಕ್ರಮಣ’ ಅಂದರೆ ಮೇ ತಿಂಗಳ ಮಧ್ಯಭಾಗದಲ್ಲಿ ಇಲ್ಲಿನ ಜಾತ್ರಾ ಮಹೋತ್ಸವ ನಡೆಯುತ್ತದೆ. ಉಳ್ಳಾಯ ದೈವಸ್ಥಾನದ ಮುಂಭಾಗದ ನಂದಿನಿ ಹೊಳೆಯನ್ನು ಕಂಡೇವು ಕರಿಯ ಎನ್ನುತ್ತಾರೆ. ಉತ್ಸವದ ಅಂಗವಾಗಿ ನಿಗದಿಪಡಿಸಿದ ದಿನದಂದು ಇಲ್ಲಿನ ಗ್ರಾಮದ ಜನರು ಕಂಡೇವು ಕರಿಯದಲ್ಲಿ ಮೀನು ಹಿಡಿಯುತ್ತಾರೆ. ಈ ದಿನದ ಹೊರತು ಬೇರೆ ದಿನಗಳಲ್ಲಿ ಇಲ್ಲಿ ಮೀನು ಹಿಡಿಯುವುದು ನಿಷೇಧವಿದೆ. ಸಂಪ್ರದಾಯ ಮೀರಿ ಮೀನು ಹಿಡಿದರೆ ಬಲೆಗೆ ಹಾವು ಬೀಳುತ್ತದೆ ಎಂಬ ನಂಬಿಕೆಯಿದೆ.

ಆದರೆ ಈ ಬಾರಿ ಮೀನು ಹಿಡಿಯುವ ಜಾತ್ರೆಯಲ್ಲಿ ಮೀನುಗಳ ಅಭಾವ ಕಂಡುಬಂದಿದೆ. ಕಳೆದ ವರ್ಷಕ್ಕಿಂತಲೂ ಇಲ್ಲಿ ಮೀನುಗಳು ಭಾರಿ ಕಡಿಮೆ ಸಂಖ್ಯೆಯಲ್ಲಿ ದೊರೆತಿದೆ. ನದಿಯಲ್ಲಿ ತ್ಯಾಜ್ಯ ನೀರು ಹರಿದು ಅಂತರಗಂಗೆ ಕಳೆ ಬಂದ ಕಾರಣ ಮೀನುಗಳು ನಾಶವಾಗಿದೆ.

ಕಳೆದ ಏಳೆಂಟು ವರ್ಷಗಳಿಂದ ಸ್ಥಳೀಯ ಆಸ್ಪತ್ರೆಯ ಕೊಳಚೆ, ಹೋಟೆಲ್‌ ವಸತಿ ಸಮುಚ್ಚಯಗಳ ತ್ಯಾಜ್ಯ ನೇರವಾಗಿ ನಂದಿನಿಯನ್ನು ಸೇರಿ ನದಿ ಕೊಳಚೆಯಾಗಿದೆ. ಕಪ್ಪೇರಿರುವ ನೀರಿನಲ್ಲಿ ಮತ್ಸ್ಯ ಸಂತತಿ ಮಾಯವಾಗಿದೆ. ಸೇತುವೆಯ ಒಂದು ಬದಿಯ ನದಿಯುದ್ದಕ್ಕೂ ‘ಅಂತರಗಂಗೆ’ ಎಂಬ ಕಳೆ ಗಿಡ ಬೆಳೆದಿದೆ. ಇದೀಗ ನದಿಯ ಐದು ಪರ್ಸಂಟ್‌ ಜಾಗದಲ್ಲಿ ಮಾತ್ರ ಮೀನು ಹಿಡಿಯಲು ಸಾಧ್ಯವಾಗಿದೆ. ಸಿಕ್ಕ ಅಷ್ಟಿಷ್ಟು ಮೀನುಗಳೂ ಸಹ ತಿನ್ನಲು ಯೋಗ್ಯವಿಲ್ಲದೆ ರೋಗಪೀಡಿತವಾಗಿದೆ.

ಕಂಡೇವನ್ನು ಸ್ವಚ್ಛಗೊಳಿಸಿ ಅಂತ ಮಹಾನಗರ ಪಾಲಿಕೆಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಸ್ಥಳೀಯ ಆಡಳಿತಕ್ಕೂ ಮಾಹಿತಿ ನೀಡಲಾಗಿದೆ. ಪೊಲೀಸ್‌ ಇಲಾಖೆಗೂ ದೂರು ನೀಡಲಾಗಿದೆ. ಭಕ್ತರು ಸಾಕಷ್ಟು ಬಾರಿ ಪ್ರತಿಭಟನೆಯನ್ನೂ ಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬರೋಬ್ಬರಿ 800 ವರ್ಷಗಳ ಇತಿಹಾಸ ಹೊಂದಿರುವ ಕಂಡೇವಿನ ಧರ್ಮರಸು ಉಳ್ಳಾಯ ದೈವಸ್ಥಾನ ಮೀನು ಹಿಡಿಯುವ ಜಾತ್ರೆಗೂ ಕಂಟಕ ಬಂದಿದೆ. ದೈವದ ಅವಕೃಪೆಗೆ ತುತ್ತಾಗುವ ಮುನ್ನ ಈ ನದಿಯನ್ನು ಸ್ವಚ್ಛಗೊಳಿಸಬೇಕೆಂದು ಭಕ್ತರು ವಿನಂತಿಸಿಕೊಂಡಿದ್ದಾರೆ. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

error: Content is protected !!