ಕರ್ನಲ್‌ ಸೋಫಿಯಾ ಖುರೇಷಿಯವರನ್ನು ‘ಪಾಕ್‌ ಉಗ್ರರ ಸಹೋದರಿ’ ಎಂದ ಸಚಿವನಿಗೆ ಸಮನ್ಸ್!

ಭೋಪಾಲ್‌: ಆಪರೇಷನ್‌ ಸಿಂದೂರದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್‌ ಸೋಫಿಯಾ ಖುರೇಷಿಯವರನ್ನು ‘ಪಾಕ್‌ ಉಗ್ರರ ಸಹೋದರಿ’ ಎಂದು ಕರೆದಿದ್ದ ಮಧ್ಯಪ್ರದೇಶದ ಬುಡಕಟ್ಟು ಸಚಿವ ಕುನ್ವರ್‌ ವಿಜಯ್‌ ಶಾ ಗೆ ಬಿಜೆಪಿ ಸಮನ್ಸ್ ಜಾರಿ ಮಾಡಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಸಚಿವ ಕುನ್ವರ್‌ ವಿಜಯ್‌ ಶಾ, ‘ನಮ್ಮ ದೇಶದ ಪುತ್ರಿಯರ ಸಿಂದೂರವನ್ನು ಅಳಿಸಿದ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಪ್ರಧಾನಿ ಮೋದಿಯವರು ಕಳಿಸಿದರು’ ಎಂದು ಹೇಳಿದ್ದರು.

ಕುನ್ವರ್‌ ವಿಜಯ್‌ ಶಾ ಹೇಳಿಕೆಗೆ ಕಾಂಗ್ರೆಸ್‌ ಕಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಶಾ ಅವರನ್ನು ಕೂಡಲೇ ಹುದ್ದೆಯಿಂದ ತೆಗೆದುಹಾಕುವಂತೆ ಬಿಜೆಪಿಯನ್ನು ಆಗ್ರಹಿಸಿದ್ದಾರೆ. ಕುನ್ವರ್‌ ವಿಜಯ್‌ ಕೂಡ ಸೇನಾ ಪರಿವಾರಕ್ಕೆ ಸೇರಿದವರಾಗಿ ಈ ರೀತಿಯ ಹೇಳಿಕೆ ನೀಡಿದ್ದು ದುರಂತವೇ ಸರಿ. ಸದ್ಯ ಇವರ ವಿವಾದಾತ್ಮಕ ಹೇಳಿಯ ವಿಡಿಯೊ ಎಲ್ಲಡೆ ವೈರಲ್‌ ಆಗಿದ್ದು ಸ್ವಪಕ್ಷೀಯರಿಗೆ ಭಾರೀ ಮುಜುಗರ ತಂದಿದೆ.

ಸೋಫಿಯಾ ಸೇನೆಯ ಹಿನ್ನೆಲೆಯ ಕುಟುಂಬದಿಂದ ಬಂದವರು. ಸೋಫಿಯಾ ಅವರ ತಾತ ಮತ್ತು ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ಪುಣೆಯಲ್ಲಿ ನಡೆದ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಕರ್ನಲ್‌ ಸೋಫಿಯಾ ಖುರೇಷಿ ಆಗಿದ್ದಾರೆ.

ಪ್ರಸ್ತುತ ಮಿಲಿಟರಿ ಸಂವಹನಗಳನ್ನು ನಿರ್ವಹಿಸುವ ಸಿಗ್ನಲ್ಸ್‌ ವಿಭಾಗದ ಅಧಿಕಾರಿ. ಸೇನೆಯ ಉನ್ನತ ಹುದ್ದೆಗಳಲ್ಲಿ ಲಿಂಗ ಸಮಾನತೆಯ ಬಗ್ಗೆ 2020ರಲ್ಲಿ ತೀರ್ಪು ಹೊರಡಿಸಿದ್ದ ಸುಪ್ರೀಂ ಕೋರ್ಟ್‌, ಖುರೇಷಿ ಅವರ ಸಾಧನೆಯನ್ನೂ ಆ ಸಂದರ್ಭದಲ್ಲಿ ಬಣ್ಣಿಸಿತ್ತು. 2006ರಲ್ಲಿ ಕಾಂಗೋದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲೂ ಖುರೇಷಿ ಇದ್ದರು.

error: Content is protected !!