ಮಂಗಳೂರು: ಬಜ್ಪೆಯ ಕಿನ್ನಿಪದವು ಎಂಬಲ್ಲಿ ಮತೀಯ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಮನೆಗೆ ನಾಳೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಆಗಮಿಸಿ ಹೆತ್ತವರಿಗೆ ಸಾಂತ್ವನ ಹೇಳಲಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಎನ್‌ಐಎ ಹಸ್ತಾಂತರಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಸಹಾಸ್ ಶೆಟ್ಟಿ ಹೆತ್ತವರು ದ.ಕ., ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರ ನಿಯೋಗದೊಂದಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿ ಇದುವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ನಡೆಯುತ್ತಿದೆ. ಇದೊಂದು ಟಾರ್ಗೆಟ್ ಕಿಲ್ಲಿಂಗ್ ಆಗಿದ್ದು, ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಇದ್ದಾರೆ. ಇದರಲ್ಲಿ ಹಲವರು ಶಾಮೀಲಾಗಿದ್ದು, ಪೊಲೀಸ್ ಅಧಿಕಾರಿಯೂ ಶಾಮೀಲಾಗಿದ್ದಾನೆ. ಈ ಹತ್ಯೆಗಾಗಿ ವಿದೇಶದಿಂದ 50 ಲಕ್ಷ ಹಣ ಹರಿದುಬಂದಿರುವುದರಿಂದ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು. ರಾಜ್ಯ ಸರ್ಕಾರ ಎನ್‌ಐಎಗೆ ವಹಿಸದಿದ್ದರೆ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಲಾಗಿತ್ತು. ಆದರೆ ಇದೀಗ ಜೆಪಿ ನಡ್ಡಾ ಸುಹಾಸ್ ಮನೆಗೆ ಬರುತ್ತಿದ್ದು, ಪ್ರಕರಣ ಎನ್‌ಐಎ ಹಸ್ತಾಂತರವಾಗುತ್ತಾ ಎನ್ನುವ ಕುತೂಹಲ ಮೂಡಿಸಿದೆ.