ನವದೆಹಲಿ: ಆಯಾ ರಾಜ್ಯಗಳಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರು ಪಾಕಿಸ್ತಾನಕ್ಕೆ ಶೀಘ್ರ ಮರಳುವಂತೆ ಸೂಚಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತಕ್ಕ ಶಿಕ್ಷೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಈ ವಿಷಯದಲ್ಲಿ ರಾಜ್ಯಗಳು ಸಮನ್ವಯ ಸಾಧಿಸಲು ಕೇಳಿಕೊಂಡಿದ್ದಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಹೇಳಿದ್ದಾರೆ.
ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿರಬಾರದು. ಯಾಕೆಂದರೆ ಪಹಲ್ಗಾಮ್‌ನಲ್ಲಿ ಹೆಚ್ಚಾಗಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಿರಾಯುಧ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿದ್ದಾರೆ. ಭಾರತ ಸರ್ಕಾರ ಈ ಬಗ್ಗೆ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅಲ್ಪಾವಧಿಯ ವೀಸಾ ಹೊಂದಿರುವವರ ವೀಸಾಗಳನ್ನು ರದ್ದುಗೊಳಿಸಬೇಕೆಂದು ನಮಗೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ ಎಂದು ವಿಷ್ಣು ದೇವ್ ಸಾಯಿ ಹೇಳಿದ್ದಾರೆ.
ಬಹುತೇಕ ಪ್ರವಾಸಿಗರು ಸೇರಿದಂತೆ 26 ಮಂದಿಯನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾದ ಕಾರಣ, ಇದೇ ಏಪ್ರಿಲ್ 27 ರಿಂದ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ರದ್ದುಗೊಳಿಸುವುದಾಗಿ ಭಾರತ ಘೋಷಿಸಿತ್ತು. ಅದರ ಜೊತೆಗೆ ಪಾಕಿಸ್ತಾನದಲ್ಲಿ ವಾಸಿಸುವ ಭಾರತೀಯ ಪ್ರಜೆಗಳು ಆದಷ್ಟು ಬೇಗನೆ ತವರುದೇಶಕ್ಕೆ ಮರಳುವಂತೆ ಸಲಹೆ ನೀಡಲಾಗಿದೆ.